ಕೊಡಗು, ಫೆ. 23 (DaijiworldNews/SM) : ಜಮ್ಮು-ಕಾಶ್ಮೀರದ ಶ್ರೀ ನಗರದಲ್ಲಿ ಭಾರೀ ಹಿಮಪಾತವಾಗುತ್ತಿದ್ದು, ಹಿಮಪಾತದಿಂದಾಗಿ ಕೊಡಗು ಜಿಲ್ಲೆ ವಿರಾಜಪೇಟೆಯ ಯೋಧ ಅಲ್ತಾಫ್ ಅಹಮ್ಮದ್ (37) ಅವರು ಹುತಾತ್ಮರಾಗಿದ್ದಾರೆ. ಬುಧವಾರದಂದು ಮುಂಜಾನೆ ಕರ್ತವ್ಯ ನಿರ್ವಹಿಸುತ್ತಿದ್ದ ವೇಳೆ ಈ ದುರ್ಘಟನೆ ಸಂಭವಿಸಿದೆ ಎಂದು ತಿಳಿದು ಬಂದಿದೆ.
ವಿರಾಜಪೇಟೆ ಪಟ್ಟಣದ ಸೇಟ್ ಅನ್ನಮ್ಮ ವಿದ್ಯಾಸಂಸ್ಥೆಯಲ್ಲಿ ಶಾಲಾ ಶಿಕ್ಷಣ ಪೂರ್ಣಗೊಳಿಸಿ, ಬಳಿಕ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಪಿಯು ಶಿಕ್ಷಣ ಪಡೆದಿದ್ದರು. ಸೇನಾ ನೇಮಕಾರಿ ರ್ಯಾಲಿಯಲ್ಲಿ ಪಾಲ್ಗೊಂಡು ಭಾರತೀಯ ಸೇನೆಗೆ ಆಯ್ಕೆಯಾಗಿದ್ದರು ಯೋಧ ಅಲ್ತಾಫ್ ಅಹಮ್ಮದ್. ಪಟ್ಟಣದ ಮೀನುಪೇಟೆಯಲ್ಲಿ ವಾಸವಾಗಿದ್ದ ದಿ. ಉಮ್ಮರ್ ಮತ್ತು ಆಶೀಯಾ ದಂಪತಿಗಳ ಪುತ್ರ ಅಲ್ತಾಫ್ ಅಹಮ್ಮದ್. ಅಲ್ತಾಫ್ ಅವರಿಗೆ ಪತ್ನಿ, ಪುತ್ರ ಹಾಗೂ ಪುತ್ರಿ ಇದ್ದಾರೆ. ಪತ್ನಿ ಹಾಗೂ ಮಕ್ಕಳು ಕೇರಳದ ಮಟ್ಟೂರಿನಲ್ಲಿ ಅಲ್ತಾಫ್ ಅಹಮ್ಮದ್ ಅವರ ಸಹೋದರಿಯೊಂದಿಗೆ ವಾಸವಾಗಿದ್ದರೆ. ತಾಯಿ ಆಶೀಯಾ ಅವರು ಚೆನ್ನಯ್ಯಕೋಟೆಯಲ್ಲಿ ವಾಸಿಸುತ್ತಿದ್ದಾರೆ. ಬುಧವಾರ ಬೆಳಗ್ಗೆ ಕರ್ತವ್ಯಕ್ಕೆ ತೆರಳುವ ಮೊದಲು ಅಲ್ತಾಫ್ ಅವರು ತಾಯಿಗೆ ವೀಡಿಯೋ ಕರೆ ಮಾಡಿ ಮಾತನಾಡಿದ್ದರು ಎಂದು ತಿಳಿದು ಬಂದಿದೆ.
ಹುತಾತ್ಮ ಯೋಧನ ಮೃತದೇಹ ಶುಕ್ರವಾರದಂದು ಕೊಡಗು ಜಿಲ್ಲೆಗೆ ಆಗಮಿಸುವ ನಿರೀಕ್ಷೆಯಿದೆ. ವಿರಾಜಪೇಟೆ ಪಟ್ಟಣದಲ್ಲಿ ಅಂತ್ಯಕ್ರಿಯೆ ನೆರವೇರಿಸಲಾಗುವುದು ಎಂದು ಕುಟುಂಬದ ಮೂಲಗಳು ತಿಳಿಸಿವೆ.