ಶ್ರೀನಗರ, ಫೆ. 23 (DaijiworldNews/SM): ಕಾಶ್ಮೀರದಲ್ಲಿ ಭಾರೀ ಹಿಮಪಾತವಾಗುತ್ತಿದ್ದು, ಜನಜೀವನ ಅಸ್ತವ್ಯಸ್ತವಾಗಿದೆ. ವಿಮಾನ ಹಾರಾಟವನ್ನು ಮುಂಜಾಗೃತ ಕ್ರಮವಾಗಿ ರದ್ದುಗೊಳಿಸಲಾಗಿದ್ದು, ಅದೇ ರೀತಿಯಲ್ಲಿ ರಾಷ್ಟ್ರೀಯ ಹೆದ್ದಾರಿಯನ್ನೂ ಕೂಡಾ ತಾತ್ಕಾಲಿಕವಾಗಿ ಮುಚ್ಚಲಾಗಿದೆ ಎಂದು ತಿಳಿದು ಬಂದಿದೆ.
ಕಾಲೇಜುಗಳು, ವಿಶ್ವವಿದ್ಯಾಲಯಗಳು ಮತ್ತು ಸಂಸ್ಥೆಗಳು ಇಂದು ನಿಗದಿಪಡಿಸಿದ್ದ ಎಲ್ಲಾ ಪರೀಕ್ಷೆಗಳನ್ನು ಮುಂದೂಡಿದೆ. ಸದ್ಯ ಸಾರ್ವಜನಿಕರಿಗೆ ತುರ್ತು ಕರೆಗಾಗಿ ಪ್ರತೀ ಜಿಲ್ಲೆಗೆ ಸಹಾಯವಾಣಿಯನ್ನು ಕೂಡಾ ನೀಡಿದೆ.ಬಾರಾಮುಲ್ಲಾದಿಂದ ಬನಿಹಾಲ್ ಗೆ ರೈಲು ಸೇವೆಯನ್ನು ಕೂಡಾ ನಿಲ್ಲಿಸಲಾಗಿದೆ. ಸರಕಾರವು ರಸ್ತೆಗಳಿಂದ ಹಿಮವನ್ನು ತೆರವು ಗೊಳಿಸುವ ಕಾರ್ಯಾಚರಣೆಯನ್ನು ನಡೆಸುತ್ತಿದ್ದು, ಶ್ರೀನಗರದಿಂದ ಇತರ ಜಿಲ್ಲೆಗಳಿಗೆ ತೆರಳುವ ಹೆದ್ದಾರಿಗಳನ್ನೂ ಕೂಡಾ ತಾತ್ಕಾಲಿಕವಾಗಿ ಮುಚ್ಚಲಾಗಿದೆ. ಹಿಮಪಾತದಿಂದ ಅನೇಕ ಮನೆಗಳಿಗೆ ಹಾನಿಯಾಗಿದೆ ಎಂದು ವರದಿಯಾಗಿದೆ.
ರೈಲು ಹಳಿಗಳ ಮೇಲೆ ಹಿಮದ ಶೇಖರಣೆಯಿಂದ ಬಾರಾಮುಲ್ಲಾ-ಬನಿಹಾಲ್ ನಡುವಿನ ರೈಲು ಸಂಚಾರವನ್ನು ಬುಧವಾರ ಮುಂಜಾನೆಯಿಂದಲೇ ಸ್ಥಗಿತಗೊಳಿಸಲಾಗಿದೆ ಎಂದು ರೈಲ್ವೇ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.