ಶಿವಮೊಗ್ಗ, ಫೆ. 23 (DaijiworldNews/SM): ಶಿವಮೊಗ್ಗದಲ್ಲಿ ದುಷ್ಕರ್ಮಿಗಳಿಂದ ಹತ್ಯೆಗೀಡಾಗಿದ್ದ ಬಜರಂಗದಳ ಕಾರ್ಯಕರ್ತ ಹರ್ಷ ಸೀಗೆಹಟ್ಟಿಯ ನಿವಾಸಕ್ಕೆ ಬಿಜೆಪಿ ರಾಜಾಧ್ಯಕ್ಷ ನಳಿನ್ ಕುಮಾರ್ ಕಟೀಲ್, ಸಚಿವ ಕೋಟ ಶ್ರೀನಿವಾಸ್ ಪೂಜಾರಿ ಸೇರಿದಂತೆ ಬಿಜೆಪಿಯ ಪ್ರಮುಖ ನಾಯಕರು ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿ ಧೈರ್ಯ ತುಂಬಿದ್ದಾರೆ.
ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಜೊತೆಯಲ್ಲಿ ಸಚಿವ ಈಶ್ವರಪ್ಪ, ಕೋಟ ಶ್ರೀನಿವಾಸ ಪೂಜಾರಿ, ಬಿಜೆಪಿ ರಾಜ್ಯ ಉಪಾಧ್ಯಕ್ಷ ವಿಜಯೇಂದ್ರ ಸೇರಿ ಕೆಲವು ಶಾಸಕರು ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿ, ಕುಟುಂಬಸ್ಥರಿಗೆ ಧೈರ್ಯವನ್ನು ತುಂಬಿದ್ದಾರೆಂದು ತಿಳಿದು ಬಂದಿದೆ.
ಮುಂದೆ ಇಂತಹ ಕೃತ್ಯ ನಡೆಯದಂತೆ ನೋಡಿಕೊಳ್ಳುತ್ತೇವೆ : ನಳೀನ್ ಕುಮಾರ್
ದುಷ್ಕರ್ಮಿಗಳಿಂದ ಬಲಿಯಾದ ಹರ್ಷನ ಕುಟುಂಬಕ್ಕೆ ಧೈರ್ಯ ಹಾಗೂ ಆತ್ಮಸ್ಥರ್ಯ ತುಂಬುವ ಕೆಲಸವನ್ನು ನಾವು ಮಾಡಿದ್ದೇವೆ. ಅಲ್ಲದೆ ಘಟನೆಯ ಕುರಿತು ಸಂಪೂರ್ಣ ವರದಿ ನೀಡುವಂತೆಯೂ ಕೇಳಿದ್ದೇವೆ. ಈ ಕೃತ್ಯದ ಹಿಂದಿರುವ ಕಾಣದ ಶಕ್ತಿಗಳನ್ನು ನಾವು ಮಟ್ಟ ಹಾಕುತ್ತೇವೆ ಮಾತ್ರವಲ್ಲದೆ ಇಂತಹ ಘಟನೆಗಳು ನಡೆಯದಂತೆ ಎಚ್ಚರಿಕೆಯನ್ನು ಹಾಗೂ ಕಟ್ಟು ನಿಟ್ಟಿನ ಕ್ರಮವನ್ನು ಕೈಗೊಳ್ಳುತ್ತೇವೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಹೇಳಿದರು.
ಹರ್ಷನ ಕುಟುಂಬದ ಜೊತೆ ನಾವಿದ್ದೇವೆ : ಸಚಿವ ಕೋಟ
ಮತಾಂಧ ಶಕ್ತಿಗಳು ಹರ್ಷನ ಹತ್ಯೆ ಮಾಡಿದ್ದಾರೆ, ಬೇರೆಯವರಿಗೆ ಹೀಗೆ ಆಗಬಾರದು. ಇಂತಹ ಘಟನೆಗಳು ಮರುಕಳಿಸದಂತೆ ಕಠಿಣ ಕ್ರಮ ಕೈಗೊಳ್ಳುವ ಭರವಸೆ ನೀಡಿದ್ದೇವೆ. ಸರ್ಕಾರ ಹಾಗೂ ಸಮಾಜಕ್ಕೆ ದೊಡ್ಡ ಸವಾಲು ಇದೆ. ಈ ಕೃತ್ಯದ ಹಿಂದೆ ಯಾವ ಸಂಘಟನೆ ಇದ್ದರೂ ಜೈಲಿಗೆ ಕಳುಹಿಸುವ ಕ್ರಮವನ್ನು ಕೈಗೊಳ್ಳುತ್ತೇವೆ. ಮೃತ ಹರ್ಷನ ಕುಟುಂಬದ ಜೊತೆಗೆ ನಾವಿದ್ದೇವೆ ಎಂದು ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದ್ದಾರೆ.