ಶಿವಮೊಗ್ಗ, ಫೆ 23 (DaijiworldNews/HR): ಹರ್ಷ ಹತ್ಯೆ ಪ್ರಕರಣದ ಬಳಿಕ ಶಿವಮೊಗ್ಗ ನಗರದಲ್ಲಿ ವಾತಾವರಣ ಬೂದಿ ಮುಚ್ಚಿದ ಕೆಂಡದಂತಿರುವುದರಿಂದ ಮುಂಜಾಗ್ರತಾ ಕ್ರಮವಾಗಿ ನಿಷೇಧಾಜ್ಞೆಯನ್ನು ಫೆಬ್ರವರಿ 26ರವರೆಗೆ ವಿಸ್ತರಣೆ ಮಾಡಲಾಗಿದೆ ಎಂದು ಜಿಲ್ಲಾಧಿಕಾರಿ ಡಾ.ಸೆಲ್ವಮಣಿ ತಿಳಿಸಿದ್ದಾರೆ.
ಈ ಕುರಿತು ಆದೇಶ ಹೊರಡಿಸಿರುವ ಜಿಲ್ಲಾಧಿಕಾರಿ, ಸಾರ್ವಜನಿಕ ಶಾಂತಿ ಮತ್ತು ಕಾನೂನು ಸುವ್ಯವಸ್ಥೆಯನ್ನು ಕಾಪಾಡುವ ಹಿತದೃಷ್ಠಿಯಿಂದ ಶಿವಮೊಗ್ಗ ನಗರ ವ್ಯಾಪ್ತಿಯೊಳಗೆ ಸಿಆರ್ ಪಿಸಿ ಕಲಂ 144 ರನ್ವಯ ಪ್ರತಿಬಂಧಕಾಜ್ಞೆಯನ್ನು ಫೆಬ್ರವರಿ 26 ಬೆಳಿಗ್ಗೆ 9 ಗಂಟೆಯವರೆಗೆ ಜಾರಿಗೊಳಿಸಲಾಗಿದೆ ಎಂದಿದ್ದಾರೆ.
ಇನ್ನು ನಿಷೇಧಾಜ್ಞೆಯ ಸಂದರ್ಭದಲ್ಲಿ ಐದಕ್ಕಿಂತ ಹೆಚ್ಚು ಜನರ ಗುಂಪು ಸೇರುವಂತಿಲ್ಲ. ಯಾವುದೇ ಮೆರವಣಿಗೆ ಸಭೆ, ಸಮಾರಂಭಗಳು, ವಿಜಯೋತ್ಸವ, ಸಾರ್ವಜನಿಕ ಪ್ರತಿಭಟನಾ ಮೆರವಣಿಗೆ, ಜಾಥಾ, ಧರಣಿ, ಮುಷ್ಕರ, ರಸ್ತೆ ರೋಕೋ ನಡೆಸುವಂತಿಲ್ಲ ಎಂದು ತಿಳಿಸಿದ್ದಾರೆ.