ಭೋಪಾಲ್, ಫೆ 23 (DaijiworldNews/KP): ಆಫ್ಲೈನ್ನಲ್ಲಿ ಪರೀಕ್ಷೆಗಳು ನಡೆಸುತ್ತಿರುವುದರಿಂದ ಒತ್ತಡಕ್ಕೆ ಒಳಗಾಗಿ ಮಧ್ಯಪ್ರದೇಶದ ಛತ್ತರ್ಪುರ ನಗರದ 10ನೇ ತರಗತಿ ವಿದ್ಯಾರ್ಥಿಯೋರ್ವ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಕೊತ್ವಾಲಿ ಪೊಲೀಸ್ ಠಾಣೆಯ ಉಸ್ತುವಾರಿ ಅನುಪ್ ಯಾದವ್ ಇಂದು ಬೆಳಗ್ಗೆ ತಿಳಿಸಿದ್ದಾರೆ.
ಸಾಂದರ್ಭಿಕ ಚಿತ್ರ
ಮೃತರನ್ನು ಹನುಮಾನ್ ಟೋರಿಯಾ ಪ್ರದೇಶದ 17 ವರ್ಷದ ಬಾಲಕ ಎಂದು ಗುರುತಿಸಲಾಗಿದೆ.
ಕೊರೊನಾ ವೈರಸ್ ಪ್ರೇರಿತ ನಿರ್ಬಂಧಗಳ ಹಿನ್ನೆಲೆಯಲ್ಲಿ ಬಾಲಕ ಕಳೆದ ಎರಡು ವರ್ಷಗಳಿಂದಲೂ ಆನ್ಲೈನ್ ತರಗತಿಗಳನ್ನು ಕೇಳುತ್ತಿದ್ದನು. ಆದರೆ ಈಗ ಭೌತಿಕ ಪರೀಕ್ಷೆಗೆ ಹಾಜರಾಗುವಂತೆ ಸೂಚಿಸಲಾಗಿತ್ತು. ಪರೀಕ್ಷೆ ಸ್ವರೂಪದಲ್ಲಿನ ಈ ಹಠಾತ್ ಬದಲಾವಣೆಯಿಂದಾಗಿ ಆತ ಖಿನ್ನತೆಗೆ ಒಳಗಾಗಿದ್ದ ಎಂದು ಅವರ ತಂದೆ ಅಮಿತ್ ತಾಮ್ರಕರ್ ಹೇಳಿದ್ದಾರೆ.
ಸರ್ಕಾರಿ ಶಾಲೆಯಲ್ಲಿ ಓದುತ್ತಿದ್ದ ಬಾಲಕನಿಗೆ ಮಂಗಳವಾರ ಗಣಿತ ಪರೀಕ್ಷೆ ಇತ್ತು. ಇನ್ನು ಯಾವಗಲೂ ಮನೆಯಲ್ಲಿ ಪ್ರತ್ಯೇಕ ಕೋಣೆಯಲ್ಲಿ ಮಲಗಿದ್ದ ಆತ ಪರೀಕ್ಷೆಯ ದಿನದಂದು ಬೇಗ ಏಳಲು ಬೆಳಿಗ್ಗೆ 5 ಗಂಟೆಗೆ ಅಲಾರಾಂ ಇಟ್ಟಿದ್ದರು ಎಂದು ಬಾಲಕನ ಚಿಕ್ಕಪ್ಪ ಸುದ್ದಿಗಾರರಿಗೆ ಮಾಹಿತಿ ನೀಡಿದ್ದಾರೆ.
ಇನ್ನು ಬೆಳಿಗ್ಗೆ ಅಲಾರಾಂ ಬಾರಿಸಿದಾಗ, ಬಾಲಕನ ಕುಟುಂಬ ಸದಸ್ಯರು ಅವನ ಕೋಣೆಗೆ ಹೋಗಿ ನೋಡಿದಾಗ ಆತ ಸ್ಕಾರ್ಫ್ನೊಂದಿಗೆ ಸೀಲಿಂಗ್ ಫ್ಯಾನಿಗೆ ನೇಣು ಬಿಗಿದುಕೊಂಡಿರುವುದು ಕಂಡುಬಂದಿದೆ.
ಈ ಬಗ್ಗೆ ಕೊತ್ವಾಲಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಘಟನೆಯ ಹಿಂದಿನ ನಿಖರ ಕಾರಣ ಪತ್ತೆಹಚ್ಚಲು ತನಿಖೆ ನಡೆಸುತ್ತಿರುವುದಾಗಿ ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.