ಬೆಂಗಳೂರು, ಫೆ 23 (DaijiworldNews/KP): ಸಮಾಜಘಾತಕ ಶಕ್ತಿಗಳ ಬೆಳವಣಿಗೆಯಲ್ಲಿ ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿಗಳ ಪಾತ್ರದ ಕುರಿತು ಸಾರ್ವಜನಿಕರಿಂದ ದೂರುಗಳು ಬಂದಿದೆ ಎಂದು ಗೃಹ ಸಚಿವ ಅರಗ ಜ್ಞಾನೇಂದ್ರ ಹೇಳಿದರು.
ಇಂದು ಬಜರಂಗದ ಕಾರ್ಯಕರ್ತ ಹರ್ಷ ಕೊಲೆ ಪ್ರಕರಣದ ವಿಚಾರವಾಗಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಶಿವಮೊಗ್ಗದಲ್ಲಿ ಹಿಂದೂ ಕಾರ್ಯಕರ್ತ ಹರ್ಷ ಕುರಿತಂತೆ ಇದುವರೆಗೆ ಎಂಟು ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಹೇಳಿದರು.
ಇನ್ನು ಬಂಧಿತ ಆರೋಪಿಗಳು ಒಂದಕ್ಕಿಂತ ಹೆಚ್ಚು ಅಪರಾಧ ಕೃತ್ಯಗಳು ಮಾಡಿದ್ದು, ಈ ಕೃತ್ಯಗಳಿಗೆ ಕಡಿವಾಣ ಹಾಕಲು ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ವಿಫಲರಾಗಿದ್ದು, ಈ ಬಗ್ಗೆಯೂ ಸಾರ್ವಜನಿಕರಿಂದ ದೂರುಗಳು ಬಂದಿದೆ ಎಂದರು.
ಈ ಬಗ್ಗೆ ಒಂದು ವಾರದಲ್ಲಿ ತನಿಖೆ ನಡೆಸಿ ವರದಿ ಸಲ್ಲಿಸುವಂತೆ ರಾಜ್ಯ ಪೊಲೀಸ್ ಮುಖ್ಯಸ್ಥರಿಗೆ ಪತ್ರ ಬರೆಯಲಾಗಿದೆ ಎಂದು ಅವರು ಹೇಳಿದರು.
ಕ್ರಿಮಿನಲ್ ಹಿನ್ನಲೆಯುಳ್ಳ ಆರೋಪಿಗಳ ವಿರುದ್ಧ ಕಳೆದ ಐದು ವರ್ಷದಲ್ಲಿ ಶಿವಮೊಗ್ಗ ಜಿಲ್ಲೆಯ ದೊಡ್ಡಪೇಟೆ ಹಾಗೂ ಕೋಟೆ ಠಾಣೆಗಳಲ್ಲಿ ಪ್ರಕರಣ ದಾಖಲಾಗಿದೆ, ಆದರೆ ಈ ವೇಳೆ ಕರ್ತವ್ಯ ನಿರ್ವಹಿಸಿದ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಕೈಗೊಂಡ ಕ್ರಮಗಳೇನು? ಎಂದು ಪ್ರಶ್ನಿಸಿದರು.
ಇನ್ನು ಕರ್ತವ್ಯ ನಿರ್ವಹಣೆಯಲ್ಲಿ ನಿರ್ಲಕ್ಷ್ಯದ ಲೋಪ ಹಾಗೂ ಮೇಲಧಿಕಾರಿಗಳು ನೀಡಿದ ನಿರ್ದೇಶನವನ್ನು ಪಾಲನೆಯಾಗದಿರುವುದರ ಬಗ್ಗೆ ತನಿಖೆ ನಡೆಸಿ ವರದಿ ಸಲ್ಲಿಸಬೇಕು ಎಂದು ಗೃಹ ಸಚಿವ ನಿರ್ದೇಶನ ನೀಡಿದರು.