ಬೆಂಗಳೂರು, ಫೆ 23 (DaijiworldNews/HR): ರಾಜ್ಯದಲ್ಲಿ ಶಾಂತಿ-ಭದ್ರತೆಗೆ ಅಪಾಯ ಎದುರಾಗಿದ್ದು, ಅಭಿವೃದ್ಧಿ, ಆವಿಷ್ಕಾರ, ಸೃಜನಶೀಲ, ವಿಜ್ಞಾನ-ತಂತ್ರಜ್ಞಾನಕ್ಕೆ ಹೆಸರಾದ ಕರ್ನಾಟಕ ಈಗ ವಿರುದ್ಧ ದಿಕ್ಕಿನಲ್ಲಿ ಜಗತ್ತಿನ ಗಮನ ಸೆಳೆದು ಕೃತಾರ್ಥವಾಗುತ್ತಿದೆ. ರಾಷ್ಟ್ರೀಯ ಪಕ್ಷಗಳೆರಡೂ ಕರ್ನಾಟಕದ ಪ್ರತಿಷ್ಠೆಗೆ ಕೊಳ್ಳಿ ಇಟ್ಟು ವಿಕೃತ ಕೇಕೆ ಹಾಕುತ್ತಿವೆ ಎಂದು ಕುಮಾರಸ್ವಾಮಿ ಕಿಡಿ ಕಾರಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಅವರು, ಶಿಕ್ಷಣದ ಕಾಶಿ ಕರ್ನಾಟಕದ ಶಾಲೆ-ಕಾಲೇಜುಗಳಲ್ಲಿ ಸಂಘರ್ಷದ ವಾತಾವರಣ ಸೃಷ್ಟಿಸಿ ಮಕ್ಕಳಲ್ಲಿ ದ್ವೇಷದ ವಿಷವುಕ್ಕಿಸಲಾಗುತ್ತಿದೆ. ಎರಡು ವರ್ಷದಿಂದ ಕೋವಿಡ್ ಹೊಡೆತದಿಂದ ಮಲಗಿರುವ ವಿದ್ಯಾರಂಗವನ್ನು ಸರ್ವನಾಶ ಮಾಡುವ ಹುನ್ನಾರವಷ್ಟೇ ಇದು. ಬಡವರ ಮಕ್ಕಳು ಓದಿ ವಿದ್ಯಾವಂತರಾಗಬಾರದೇ? ಎಂದು ಪ್ರಶ್ನಿಸಿದ್ದಾರೆ.
ಎರಡೂ ರಾಷ್ಟ್ರೀಯ ಪಕ್ಷಗಳು ರಾಜ್ಯಾದ್ಯಂತ ರಾಜಕೀಯ ಕೊರೊನಾವನ್ನು ಹಬ್ಬಿಸುತ್ತಿವೆ. ಆ ಮೂಲಕ ಜನರ ಮನಸ್ಸುಗಳನ್ನು ಹಾಳು ಮಾಡುತ್ತಿವೆ. ಈ ಮಹಾಮಾರಿಗೆ ಲಸಿಕೆ ಇಲ್ಲ. ಜನರು ಈ ಹುನ್ನಾರವನ್ನು ಅರ್ಥ ಮಾಡಿಕೊಂಡರೆ ಒಳ್ಳೆಯದು ಎಂದಿದ್ದಾರೆ.
ಇನ್ನು ಅಧಿಕೃತ ಪ್ರತಿಪಕ್ಷದ ಸ್ವಪ್ರತಿಷ್ಠೆ, ಆಡಳಿತ ಪಕ್ಷದ ಅಸಮರ್ಥತೆಗೆ ವಿಧಾನ ಕಲಾಪ ಆಪೋಶನವಾಯಿತು. ನಾನು ಹೊಡೆದಂಗೆ ಮಾಡುತ್ತೇನೆ, ನೀನು ಅತ್ತಂಗೆ ಮಾಡು ಎನ್ನುವಂತೆ ಬಿಜೆಪಿ-ಕಾಂಗ್ರೆಸ್ ಪಕ್ಷಗಳು ಕುಮ್ಮಕ್ಕಾಗಿ ಕಲಾಪಕ್ಕೆ ಕುಣಿಕೆ ಬಿಗಿದು ಜನರ ಆಶೋತ್ತರಗಳನ್ನು ಸದನದಲ್ಲೇ ಸಮಾಧಿ ಮಾಡಿದವು ಎಂದರು.
ಹಿಜಾಬ್, ಕೇಸರಿ ಶಾಲು ಮತ್ತು ಶಿವಮೊಗ್ಗದಲ್ಲಿ ನಡೆದ ಯುವಕನ ಕೊಲೆ... ಇವೆಲ್ಲಾ ಯಾರಿಂದ ಯಾರಿಗಾಗಿ ನಡೆಯುತ್ತಿವೆ? ಈ ಟೂಲ್ʼಕಿಟ್ ರೂವಾರಿಗಳು ಯಾರು? ಅಧಿವೇಶನವನ್ನು ಹಳ್ಳ ಹಿಡಿಸಿದ್ದಕ್ಕೂ ಈ ಎಲ್ಲಾ ಪ್ರತಿಗಾಮಿ ಘಟನೆಗಳಿಗೆ ಸಂಬಂಧ ಇದೆ ಎನ್ನುವ ಅನುಮಾನ ನನ್ನದು. ಸತ್ಯವೇನೆಂಬುದು ಜನರಿಗೆ ಗೊತ್ತಾಗಬೇಕು ಎಂದು ಆಗ್ರಹಿಸಿದ್ದಾರೆ.
https://daijiworld.ap-south-1.linodeobjects.com/Linode/img_tv247/PY-171121-animal3.jpg