ಬೆಂಗಳೂರು, ಫೆ 23 (DaijiworldNews/KP): ಮತಾಂಧ ಶಕ್ತಿಗಳು ಅಮಾಯಕರ ಸಮಾಧಿ ಮೇಲೆ ಸೌಧ ಕಟ್ಟುವುದನ್ನು ನಿಲ್ಲಿಸಿ ಎಂದು ಕಾಂಗ್ರೆಸ್ ನಾಯಕ ದಿನೇಶ್ ಗುಂಡೂರಾವ್ ಹೇಳಿದ್ದಾರೆ.
ಶಿವಮೊಗ್ಗದ ಬಜರಂಗದ ಕಾರ್ಯಕರ್ತ ಹರ್ಷ ಕೊಲೆ ಪ್ರಕರಣದ ವಿಚಾರವಾಗಿ ಟ್ವೀಟ್ ಮಾಡಿದ ಅವರು, ಶಿವಮೊಗ್ಗದಲ್ಲಿ ಹತ್ಯೆಯಾದ ಮೃತ ಹರ್ಷನ ಸೋದರಿ ಅಶ್ವಿನಿಯ ಮಾತೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ ಎಂದು ಬರೆದು ಕನ್ನಡ ಪತ್ರಿಕೆಯೊಂದರಲ್ಲಿ ಪ್ರಕಟವಾದ ಸುದ್ದಿಯನ್ನು ಹಂಚಿಕೊಂಡಿದ್ದಾರೆ.
ಮೃತ ಹರ್ಷನ ಸೋದರಿ ವ್ಯಕ್ತಪಡಿಸಿರುವ ಅಭಿಪ್ರಾಯ ಅತ್ಯಂತ ಪ್ರಸ್ತುತ. ಕೆಲ ಮತಾಂಧ ಶಕ್ತಿಗಳು ಮುಗ್ದರ ತಲೆಯಲ್ಲಿ ಮತಾಂಧತೆಯನ್ನು ತುಂಬುತ್ತಾ ಕೋಮುದ್ವೇಷ ಹರಡುತ್ತಿದ್ದಾರೆ. ಆದರೆ ಅಮಾಯಕರೇ ಈ ಮತಾಂಧ ಶಕ್ತಿಗಳ ಷಡ್ಯಂತ್ರದ ಬಲಿ ಎಂದು ಟ್ವೀಟ್ ಮಾಡಿದ್ದಾರೆ.
ಇನ್ನು ಸಮಾಜಕ್ಕೆ ಬೇಕಿರುವುದು ಧರ್ಮದ ಶಾಂತಿ ಸಂದೇಶವೇ ಹೊರತು ಕೊಚ್ಚು, ಕೊಲ್ಲು ಸಂಸ್ಕಾರವಲ್ಲ ಎಂದು ಅವರು ಹೇಳಿದ್ದಾರೆ.
ಕೊಂದು ಉಳಿಸಿಕೊಳ್ಳುವ ಧರ್ಮ ಯಾವುದಾದರೂ ಇದೆಯೆ? ಎಂದು ಪೂರ್ಣಚಂದ್ರ ತೇಜಸ್ವಿ ಪ್ರಶ್ನಿಸಿದ್ದರು. ಪೂಚಂತೆ ಮಾತನ್ನು ಎಲ್ಲಾ ಧರ್ಮದ ಮತಾಂಧ ಶಕ್ತಿಗಳು ಅರಿತುಕೊಳ್ಳಬೇಕು ಎಂದು ಹೇಳಿದ್ದಾರೆ.