ಬೆಂಗಳೂರು, ಫೆ 23 (DaijiworldNews/HR): ಹಿಜಾಬ್ ವಿವಾದದ ಕಾರಣಕ್ಕೆ ವಿದ್ಯಾರ್ಥಿಗಳು ಪಿಯು ಪರೀಕ್ಷೆಗಳಿಗೆ ಗೈರುಹಾಜರಾದರೆ ಅವರಿಗೆ ಮರುಪರೀಕ್ಷೆ ಇರುವುದಿಲ್ಲ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಬಿ.ಸಿ. ನಾಗೇಶ್ ತಿಳಿಸಿದ್ದಾರೆ.
ಈ ಕುರಿತು ಮಾಹಿತಿ ನೀಡಿರುವ ಅವರು, ಹಿಜಾಬ್ ವಿಚಾರದಲ್ಲಿ ಹೈಕೋರ್ಟ್ ನೀಡಿರುವ ಆದೇಶವನ್ನು ಕೆಲವರು ವಿರೋಧಿಸುತ್ತಿದ್ದು, ಅಂತಹವರ ಪರವಾಗಿ ಕಾಂಗ್ರೆಸ್ನವರು ಮಾತನಾಡುವುದು ಸರಿಯಲ್ಲ. ವಿದ್ಯಾರ್ಥಿಗಳು ಹೈಕೋರ್ಟ್ ಆದೇಶ ಪಾಲಿಸಿ, ಶಾಲೆ, ಕಾಲೇಜು, ಪರೀಕ್ಷಾ ಕೇಂದ್ರಗಳಿಗೆ ಹಿಜಾಬ್ ತೆಗೆದು ಬರಬೇಕು. ಹಿಜಾಬ್ಗಾಗಿ ಹಠ ಹಿಡಿದು ಕೂತರೆ ಇಡೀ ವರ್ಷದ ಶೈಕ್ಷಣಿಕ ಜೀವನ ವ್ಯರ್ಥವಾಗುತ್ತದೆ ಎಂದಿದ್ದಾರೆ.
ಇನ್ನು ಶಿವಮೊಗ್ಗದಲ್ಲಿ ಹಿಂದೂ ಕಾರ್ಯಕರ್ತರನ್ನು ಕೊಲೆ ಪ್ರಕರಣ ಕುರಿತು ಪ್ರತಿಕ್ರಿಯಿಸಿದ ಅವರು, "ಕೊಲೆ ಮಾಡಿದ ಆರೋಪಿಗಳ ಮೇಲಿನ ಪ್ರಕರಣಗಳನ್ನು ಈ ಹಿಂದಿನ ಸರ್ಕಾರಗಳು ವಾಪಸ್ ಪಡೆದಿದ್ದೇ ಮತ್ತೆ ಮತ್ತೆ ಹತ್ಯೆ ಪ್ರಕರಣಗಳು ಮರುಕಳಿಸಲು ಕಾರಣವಾಗಿದೆ" ಎಂದು ಆಕ್ರೋಶ ವ್ಯಕ್ತಪಡಿಸಿದರು.