ಶಿವಮೊಗ್ಗ, ಫೆ 23 (DaijiworldNews/HR): ಶಿವಮೊಗ್ಗದಲ್ಲಿ ನಡೆದ ಬಜರಂಗದಳ ಕಾರ್ಯಕರ್ತ ಹರ್ಷ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ 9 ಎಫ್ಐಆರ್ ದಾಖಲಾಗಿದ್ದು, 6 ಮಂದಿಯನ್ನು ಮಂಗಳವಾರ ಬಂಧನ ಮಾಡಲಾಗಿದೆ ಎಂದು ಶಿವಮೊಗ್ಗ ಜಿಲ್ಲಾ ರಕ್ಷಣಾಧಿಕಾರಿ ಬಿ.ಎಂ. ಲಕ್ಷ್ಮಿಪ್ರಸಾದ್ ತಿಳಿಸಿದರು.
ಈ ಕುರಿತು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಲಕ್ಷ್ಮೀಪ್ರಸಾದ್, ಇಬ್ಬರು ಆರೋಪಿಗಳನ್ನು ಶಿವಮೊಗ್ಗದಲ್ಲಿ ಬಂಧಿಸಲಾಗಿದ್ದು, ಉಳಿದ ನಾಲ್ವರನ್ನು ಬೆಂಗಳೂರಿನಲ್ಲಿ ಬಂಧಿಸಲಾಗಿದೆ ಎಂದು ತಿಳಿಸಿದರು.
ಇನ್ನು ಪ್ರಕರಣದ ಪ್ರಮುಖ ಆರೋಪಿಗಳಾದ ಖಾಸಿಫ್ (30), ಸಯ್ಯದ್ ನದೀಂ ಎಂಬುವವರನ್ನು ಶಿವಮೊಗ್ಗದಲ್ಲಿ ಬಂಧಿಸಲಾಗಿದ್ದು, ಅವರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ. ಬೆಂಗಳೂರಿನಲ್ಲಿ ಆಸೀಫ್ ಉಲ್ಲಾ ಖಾನ್, ರಿಹಾನ್ ಷರೀಫ್, ನಿಹಾನ್, ಅಬ್ದುಲ್ ಅಫ್ನಾನ್ ಎಂಬುವವರನ್ನು ಬಂಧಿಸಲಾಗಿದೆ.
ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ 12 ಮಂದಿಯನ್ನು ವಿಚಾರಣೆಗೆ ಒಳಪಡಿಸಲಾಗಿದ್ದು, ಪ್ರಕರಣ ಸಂಬಂಧ ಮತ್ತಷ್ಟು ಮಂದಿಯನ್ನು ಬಂಧಿಸುವ ಸಾಧ್ಯತೆ ಇದೆ ಎಂದು ಲಕ್ಷ್ಮಿಪ್ರಸಾದ್ ತಿಳಿಸಿದ್ದಾರೆ.
ಇನ್ನು ಹರ್ಷ ಹತ್ಯೆಗೆ ನಿಖರ ಕಾರಣ ತಿಳಿದು ಬಂದಿಲ್ಲ. ಬಂಧಿತರ ವಿಚಾರಣೆ ಬಳಿಕ ಈ ಕುರಿತು ಸ್ಪಷ್ಟತೆ ಸಿಗಲಿದೆ ಎಂದು ಮಾಹಿತಿ ನೀಡಿದ್ದಾರೆ.