ಬೆಂಗಳೂರು,ಫೆ 22 (DaijiworldNews/KP): ಶಿವಮೊಗ್ಗದಲ್ಲಿ ನಡೆದ ಬಜರಂಗದಳ ಕಾರ್ಯಕರ್ತ ಹರ್ಷ ಹತ್ಯೆಯ ಪ್ರಕರಣಕ್ಕೆ ಸಂಬಂಧಿಸಿದಂತೆ, ವಿಪಕ್ಷ ನಾಯಕ ಸಿದ್ದರಾಮಯ್ಯ ಗೃಹ ಸಚಿವರು, ಸಚಿವ ಕೆ ಎಸ್ ಈಶ್ವರಪ್ಪ ಮತ್ತು ಸರ್ಕಾರದ ಮೇಲೆ ಹರಿಹಾಯ್ದಿದ್ದಾರೆ.
ಈ ಕುರಿತು ಸರಣಿ ಟ್ವೀಟ್ ಮಾಡಿರುವ ಅವರು, ಶಿವಮೊಗ್ಗದಲ್ಲಿ ನಡೆದ ಬಜರಂಗದಳ ಕಾರ್ಯಕರ್ತ ಹರ್ಷ ಹತ್ಯೆಯ ಪ್ರಕರಣ, ಆನಂತರ ಈಶ್ವರಪ್ಪ ಮಂದಾಳತ್ವದಲ್ಲಿ ಶವಯಾತ್ರೆ ಮಾಡುವ ಮೂಲಕ ನಗದಲ್ಲಿ ಹೇರಲಾಗಿದ್ದ 144 ಸೆಕ್ಷನ್ನ ಉಲ್ಲಂಘನೆ ಮಾಡಿರುವುದು, ಈ ಎಲ್ಲಾ ಘಟನೆಗಳನ್ನು ನ್ಯಾಯಾಂಗ ತನಿಖೆಗೆ ಒಪ್ಪಿಸಬೇಕು ಎಂದು ರಾಜ್ಯ ಸರ್ಕಾರಕ್ಕೆ ಆಗ್ರಹಿಸಿದ್ದಾರೆ.
ಕೊಲೆ ಮಾಡಿದವರಿಗೆ ತಕ್ಕ ಶಿಕ್ಷೆ ಆಗಲೇಬೇಕು, ಆದರೆ ಒಬ್ಬೊಬ್ಬ ಮಂತ್ರಿಗಳು ಒಂದೊಂದು ಹೇಳಿಕೆ ನೀಡ್ತಿದ್ದಾರೆ, ಘಟಾನುಘಟಿ ನಾಯಕರ ಜಿಲ್ಲೆಯಲ್ಲೇ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ. ಪೋಲಿಸರು ಮೃತದೇಹ ಮೆರವಣಿಗೆಗೆ ಅವಕಾಶ ನೀಡಿದ್ದೇ ತಪ್ಪು, ಇನ್ನು ಯಾವ ಸಂಸ್ಥೆ ಈ ಕೊಲೆಯ ಹಿಂದಿರೋ ಅದನ್ನು ಬ್ಯಾನ್ ಮಾಡಲಿ, ಎನ್ಐಎ ತನಿಖೆಗೆ ಕೊಟ್ಟರೂ ನಮ್ಮ ಅಭ್ಯಂತರ ಇಲ್ಲ. ಆದಎ ಸರ್ಕಾರ ಈಶ್ವರಪ್ಪ ವಿರುದ್ದ ಕ್ರಿಮಿನಲ್ ಆಕ್ಷನ್ ಕೈಗೊಳ್ಳಬೇಕು ಎಂದು ಸಿದ್ದರಾಮಯ್ಯ ಒತ್ತಾಯಿಸಿದ್ದಾರೆ.
ಕಳೆದ ಮೂರು ದಿನಗಳಲ್ಲಿ ಶಿವಮೊಗ್ಗದಲ್ಲಿ 3 ಕೊಲೆಗಳು ನಡೆದಿವೆ. ಶಿವಮೊಗ್ಗ ರಾಜ್ಯದ ಗೃಹ ಸಚಿವ, ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ಸಚಿವ ಈಶ್ವರಪ್ಪನವರ ತವರು ಜಿಲ್ಲೆ. ಅಲ್ಲೇ ಈ ರೀತಿ ನಿರ್ಭಯವಾಗಿ ಕೊಲೆಗಳು ನಡೆಯುತ್ತವೆ ಎಂದರೆ ರಾಜ್ಯದಲ್ಲಿ ಸರ್ಕಾರ ಇದೆಯೇ ಎಂಬ ಪ್ರಶ್ನೆ ಸಹಜವಾಗಿ ಮೂಡುತ್ತದೆ ಎಂದಿದ್ದಾರೆ.
ಇನ್ನು Law And Order ಹ್ಯಾಷ್ಟ್ಯಾಗ್ ಬಳಸಿ ಟ್ವೀಟ್ ಮಾಡಿರುವ ಅವರು, ಹರ್ಷ ಕೊಲೆಯಾದ ದಿನವೇ ನಗರದಲ್ಲಿ 144 ಸೆಕ್ಷನ್ ಜಾರಿಯಾಗಿದ್ದರೂ ಮೃತನ ಶವಯಾತ್ರೆ ನಡೆಸಲು ಪೊಲೀಸ್ ಇಲಾಖೆ ಅವಕಾಶ ನೀಡಿದ್ದು ಹೇಗೆ?. ಅಲ್ಲದೆ ಈ ಶವಯಾತ್ರೆಯಲ್ಲಿ ಸಚಿವ ಈಶ್ವರಪ್ಪ, ಸ್ಥಳೀಯ ಸಂಸದ ರಾಘವೇಂದ್ರ ಕೂಡ ಭಾಗವಹಿಸಿದ್ದರು. ಹೀಗಾಗಿ ಈ ಶವಯಾತ್ರೆಯನ್ನು ರಾಜ್ಯ ಸರ್ಕಾರದ ಪ್ರಾಯೋಜಿತ ಶವಯಾತ್ರೆ ಎನ್ನಬೇಕಾಗುತ್ತದೆ ಎಂದು ಕಿಡಿಕಾರಿದ್ದಾರೆ.
ಇಂದು ಸಂಜೆ ವಿಧಾನಸಭೆ ಮತ್ತು ವಿಧಾನ ಪರಿಷತ್ನ ಎಲ್ಲಾ ಕಾಂಗ್ರೆಸ್ ಸದಸ್ಯರು ವಿಧಾನಸೌಧದಿಂದ ರಾಜಭವನದವರೆಗೆ ಕಾಲ್ನಡಿಗೆ ಮೂಲಕ ರಾಜ್ಯಪಾಲರನ್ನು ಭೇಟಿಯಾಗಿ ದೇಶದ್ರೋಹಿ_ಈಶ್ವರಪ್ಪ ಅವರನ್ನು ಸಚಿವ ಸ್ಥಾನದಿಂದ ವಜಾಗೊಳಿಸುವಂತೆ ಮನವಿ ಮಾಡುತ್ತೇವೆ ಎಂದು ಹೇಳಿದ್ದಾರೆ.