ಬೆಂಗಳೂರು, ಫೆ 22 (DaijiworldNews/MS): ಶೈಕ್ಷಣಿಕ ಸಂಸ್ಥೆಗಳಲ್ಲಿ ಹಿಜಾಬ್ ನಿಷೇಧಿಸಿರುವುದನ್ನು ಪ್ರಶ್ನಿಸಿರುವ ಮನವಿಗಳ ವಿಚಾರಣೆಯನ್ನು ಕರ್ನಾಟಕ ಹೈಕೋರ್ಟ್ನ ಪೂರ್ಣ ಪೀಠವು ಮಂಗಳವಾರವೂ ಮುಂದುವರಿಸಿದೆ.
ಮುಖ್ಯ ನ್ಯಾಯಮೂರ್ತಿ ರಿತುರಾಜ್ ಅವಸ್ತಿ ನೇತೃತ್ವದ ವಿಶೇಷ ಪೀಠದಲ್ಲಿ ಕಳೆದ 8 ದಿನಗಳಿಂದ ವಿಚಾರಣೆ ನಡೆಯುತ್ತಿದೆ. ನ್ಯಾಯಮೂರ್ತಿ ಕೃಷ್ಣ ಎಸ್. ದೀಕ್ಷಿತ್, ನ್ಯಾಯಮೂರ್ತಿ ಖಾಜಿ ಜೈಬುನ್ನಿಸಾ ಮೊಹಿದ್ದೀನ್ ಅವರು ಸಹ ಪೀಠದಲ್ಲಿದ್ದಾರೆ.
ಕರ್ನಾಟಕ ಸರ್ಕಾರದ ಪರವಾಗಿ ಅಡ್ವೊಕೇಟ್ ಜನರಲ್ ಪ್ರಭುಲಿಂಗ ನಾವದಗಿ ಸುಧೀರ್ಘವಾದ ಮಂಡನೆ ಮಾಡಿದ್ದು, ನಿನ್ನೆ ಹಿಜಾಬ್ ಆಯ್ಕೆಯೇ ಹೊರತು ಕಡ್ಡಾಯವಲ್ಲ ಎಂದು ವಿವಿಧ ಕೋರ್ಟ್ ತೀರ್ಪುಗಳನ್ನು ಉಲ್ಲೇಖಿಸಿದ್ದ ಅವರು ಇಂದು ಆಂತರಿಕ ಶಿಸ್ತು , ಸಾಂಸ್ಥಿಕ ಶಿಸ್ತು ಕುರಿತ ವಾದ ಮಂಡಿಸಿದರು.
"ಹಾಲಿ ಪ್ರಕರಣದಲ್ಲಿ ಸಾಂಸ್ಥಿಕ ಶಿಸ್ತಿನ ದೃಷ್ಟಿಯಿಂದ ನಿಯಮ 11ರ ಅಡಿ ಸುತ್ಯರ್ಹ ನಿರ್ಬಂಧಗಳನ್ನು ವಿಧಿಸಿದೆ. ನಮ್ಮ ದೇಶದಲ್ಲಿ ಹಿಜಾಬ್ ನಿಷೇಧಿಸಲಾಗಿಲ್ಲ. ಪ್ರತಿಯೊಂದು ಸಂಸ್ಥೆಯಲ್ಲು ಆಂತರಿಕ ನಿಯಂತ್ರಣ ಮತ್ತು ಶಿಸ್ತು ಇರುತ್ತದೆ. ಪ್ರತಿ ಸಂಸ್ಥೆಯಲ್ಲೂ ಆಂತರಿಕ ಶಿಸ್ತು ಇರುತ್ತದೆ. ಅದು ಆಸ್ಪತ್ರೆ, ಶಾಲೆಗಳು, ಸೇನಾ ಸಂಸ್ಥೆಗಳು ಯಾವುದರಲ್ಲಾದರೂ ಅಷ್ಟೆ.
ಕ್ಯಾಂಪಸ್ನಲ್ಲಿ ಹಿಜಾಬ್ ಧರಿಸುವುದಕ್ಕೆ ನಿರ್ಬಂಧವಿಲ್ಲ. ತರಗತಿಯ ವೇಳೆ ತರಗತಿಯಲ್ಲಿ ಮಾತ್ರ ಧರಿಸುವುದಕ್ಕೆ ನಿರ್ಬಂಧವಿದೆ. ಇದು ಧರ್ಮಾತೀತವಾಗಿ ಎಲ್ಲರಿಗೂ ಅನ್ವಯಿಸುತ್ತದೆ.ಫ್ರಾನ್ಸ್ ನಲ್ಲಿ ಹಿಜಾಬ್ಗೆ ನಿಷೇಧವಿದೆ. ಆದರೆ ಆ ದೇಶದಲ್ಲಿ ಇಸ್ಲಾಮ್ ಧರ್ಮವಿಲ್ಲ ಎಂದು ಯಾರೂ ಹೇಳಲು ಸಾಧ್ಯವಿಲ್ಲ" ಎಂದು ವಾದಿಸಿದ್ದಾರೆ
ಈ ವೇಳೆ ನ್ಯಾ. ದೀಕ್ಷಿತ್ ಪ್ರತಿ ದೇಶದ ಸಾಂವಿಧಾನಿಕ ನೀತಿಯನ್ನು ಅದು ಆಧರಿಸಿರುತ್ತದೆ. ರಾಷ್ಟ್ರದಿಂದ ರಾಷ್ಟ್ರಕ್ಕೆ, ಅಲ್ಲಿನ ಸ್ವಾತಂತ್ರ್ಯದ ವಿಚಾರಕ್ಕೆ ಅದು ಸಂಬಂಧಿಸಿರುತ್ತದೆ ಎಂದು ಹೇಳಿದ್ದಾರೆ.
ವಾದ ಮುಂದುವರಿಸಿದ ಸರ್ಕಾರದ ಪರವಾಗಿ ಅಡ್ವೊಕೇಟ್ ಜನರಲ್ " ಹಿಜಾಬ್ ನಿಷೇಧಿಸಲಾಗಿಲ್ಲ. ಆದರೆ ಅದು ಕಡ್ಡಾಯವಲ್ಲ. ಇದನ್ನು ಸಂಬಂಧಿತ ಮಹಿಳೆಯರಿಗೆ ಬಿಡಬೇಕು.ಸಾಂಸ್ಥಿಕ ಶಿಸ್ತು ವೈಯಕ್ತಿಕ ಆಯ್ಕೆಗಳನ್ನು ಪ್ರದರ್ಶಿಸಬಾರದು ಎಂಬ ಕಾರಣಕ್ಕಾಗಿ ಸೇನೆಯಲ್ಲಿ ಗಡ್ಡವನ್ನು ಬೆಳೆಸುವ ಹಕ್ಕನ್ನು ನಿರಾಕರಿಸಿದ ಉದಾಹರಣೆಗಳಿವೆ. ಧಾರ್ಮಿಕ ತಾರತಮ್ಯ ಮಾಡಲಾಗಿದೆ ಎಂಬುದನ್ನು ನಾವು ನಿರಾಕರಿಸುತ್ತೇವೆ. ಇವು ಆಧಾರರಹಿತ ಆರೋಪಗಳು. ಒಂದು ಸಮುದಾಯದ ಯಾವುದೇ ವ್ಯಕ್ತಿಗೆ ಇನ್ನೊಂದು ಸಮುದಾಯಕ್ಕಿಂತ ಆದ್ಯತೆ ನೀಡಲಾಗಿಲ್ಲ" ಎಂದು ತಮ್ಮ ವಾದ ಪೂರ್ಣಗೊಳಿಸಿದ್ದಾರೆ.
ಇದಾದ ಬಳಿಕ ಪ್ರತಿವಾದಿ ಶಿಕ್ಷಕರೊಬ್ಬರ ಪರವಾಗಿ ಹಿರಿಯ ವಕೀಲ ಆರ್ ವೆಂಕಟರಮಣಿ ಅವರಿಂದ ವಾದ ಆರಂಭವಾಗಿದೆ.