ಬೆಂಗಳೂರು, ಫೆ 22 (DaijiworldNews/KP): ಪತ್ನಿ ಮತ್ತು ಅತ್ತೆಯನ್ನು ಮಚ್ಚಿನಿಂದ ಕೊಚ್ಚಿ ಕೊಂದು ಆರೋಪಿ ಪೊಲೀಸರಿಗೆ ಶರಣಾಗಿರುವ ಘಟನೆ ಮಂಗಳವಾರ ಬೆಳಗ್ಗೆ ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ನಡೆದಿದೆ.
ಪತ್ನಿ ಸಾವಿತ್ರಿ ಮತ್ತು ಅತ್ತೆ ಸರೋಜಮ್ಮ ಮೃತ ದುರ್ದೈವಿಗಳು, ಆರೋಪಿಯನ್ನು ರವಿಕುಮಾರ್ ಎಂದು ಗುರುತಿಸಲಾಗಿದೆ.
ಆರೋಪಿ ರವಿಕುಮಾರ್ ಹಾಗೂ ಸಾವಿತ್ರಿ ದಂಪತಿ ನಡುವೆ ಕೌಟುಂಬಿಕ ಕಲಹವಿತ್ತು. ಇದೇ ವಿಚಾರವಾಗಿ ಸೋಮವಾರ ರಾತ್ರಿಯೂ ಇದೇ ವಿಚಾರವಾಗಿ ಜಗಳವಾಗಿತ್ತು.
ಇಂದು ಬೆಳಗ್ಗೆ ಮಕ್ಕಳಿಬ್ಬರನ್ನು ಶಾಲೆಗೆ ಕಳುಹಿಸಿದ್ದ ರವಿ ಕುಮಾರ್ ಪತ್ನಿಯೊಂದಿಗೆ ಮತ್ತೆ ಗಲಾಟೆ ಮಾಡಿದ್ದಾನೆ. ಜಗಳ ವಿಕೋಪಕ್ಕೆ ತಿರುಗಿ ಮನೆಯಲ್ಲಿದ್ದ ಎಳನೀರು ಕೊಚ್ಚುವ ಮಚ್ಚಿನಿಂದ ರವಿ ಪತ್ನಿ ಮೇಲೆ ಹಲ್ಲೆ ನಡೆಸಿದ್ದು. ತಡೆಯಲು ಬಂದ ಅತ್ತೆ ಸರೋಜಮ್ಮನ ಮೇಲೆಯೂ ಹಲ್ಲೆ ನಡೆಸಿದ್ದಾನೆ.ತೀವ್ರವಾಗಿ ಗಾಯಗೊಂಡಿದ್ದ ಇಬ್ಬರು ರಕ್ತದ ಮಡುವಿನಲ್ಲಿ ಸಾವನ್ನಪ್ಪಿದ್ದಾರೆ.
ಇನ್ನು ಕೃತ್ಯ ಬಳಿಕ ಆರೋಪಿ ರವಿ ಕುಮಾರ್ ಗೋವಿಂದರಾಜನಗರ ಪೊಲೀಸರ ಮುಂದೆ ಹತ್ಯೆ ಬಗ್ಗೆ ಮಾಹಿತಿ ನೀಡಿ ಶರಣಾಗಿದ್ದು, ಪೊಲೀಸರು ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದ್ದಾರೆ.
ಅವರಿಬ್ಬರ ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗಾಗಿ ವಿಕ್ಟೋರಿಯಾ ಆಸ್ಪತ್ರೆಗೆ ಸಾಗಿಸಲಾಗಿದ್ದು. ಈ ಕುರಿತು ಗೋವಿಂದರಾಜ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.