ಬೆಂಗಳೂರು, ಫೆ 21 (DaijiworldNews/MS): ಶೈಕ್ಷಣಿಕ ಸಂಸ್ಥೆಗಳಲ್ಲಿ ಹಿಜಾಬ್ ನಿಷೇಧಿಸಿರುವುದನ್ನು ಪ್ರಶ್ನಿಸಿರುವ ಮನವಿಗಳ ವಿಚಾರಣೆಯನ್ನು ಕರ್ನಾಟಕ ಹೈಕೋರ್ಟ್ನ ಪೂರ್ಣ ಪೀಠವು ಸೋಮವಾರವೂ ಮುಂದುವರಿಸಿದೆ.
ಮುಖ್ಯ ನ್ಯಾಯಮೂರ್ತಿ ರಿತುರಾಜ್ ಅವಸ್ತಿ ನೇತೃತ್ವದ ವಿಶೇಷ ಪೀಠದಲ್ಲಿ ಕಳೆದ 7 ದಿನಗಳಿಂದ ವಿಚಾರಣೆ ನಡೆಯುತ್ತಿದೆ. ನ್ಯಾಯಮೂರ್ತಿ ಕೃಷ್ಣ ಎಸ್. ದೀಕ್ಷಿತ್, ನ್ಯಾಯಮೂರ್ತಿ ಖಾಜಿ ಜೈಬುನ್ನಿಸಾ ಮೊಹಿದ್ದೀನ್ ಅವರು ಸಹ ಪೀಠದಲ್ಲಿದ್ದಾರೆ.
ಶುಕ್ರವಾರ ಕರ್ನಾಟಕ ಸರ್ಕಾರದ ಪರವಾಗಿ ಅಡ್ವೊಕೇಟ್ ಜನರಲ್ ಪ್ರಭುಲಿಂಗ ನಾವದಗಿ ವಾದ ಮಂಡಿಸುತ್ತಿದ್ದಾರೆ. ಸರ್ಕಾರದ ಆದೇಶವು (ಜಿಒ) ನಿರುಪದ್ರವಿಯಾಗಿದ್ದು, ವಸ್ತ್ರದ ಭಾಗವಾಗಿ ಹಿಜಾಬ್ ಧರಿಸಲು ಬಿಡಿ ಎಂದು ಅರ್ಜಿದಾರರು ಹೇಳಿಲ್ಲ. ಧಾರ್ಮಿಕ ಆಚರಣೆಯ ಭಾಗವಾಗಿ ಹಿಜಾಬ್ ಧರಿಸಲು ಬಿಡಿ ಎಂದು ಕೇಳಿದ್ದಾರೆ.
ಧರ್ಮವು ಸಂಸ್ಥೆಗಳಿಗೆ ನುಸುಳದಂತೆ ನೋಡಿಕೊಳ್ಳಿ ಎಂದು ಸಂವಿಧಾನ ರಚನಾ ಸಭೆಯ ಚರ್ಚೆಯಲ್ಲಿ ಡಾ. ಅಂಬೇಡ್ಕರ್ ಹೇಳಿದ್ದಾರೆ . ಭಗವದ್ಗೀತೆ, ಬೈಬಲ್, ಕುರಾನ್ನಲ್ಲಿ ಉದಾತ್ತ ವಿಚಾರಗಳಿವೆ. ಆದರೆ, ಅವುಗಳನ್ನು ಶೈಕ್ಷಣಿಕ ಸಂಸ್ಥೆಗಳಿಂದ ಹೊರಗಿಡಬೇಕು ಎಂದು ಹೇಳಲಾಗಿದೆ. ಏಕೆಂದರೆ ಘರ್ಷಣೆಗೆ ಅಪಶ್ರುತಿಯ ಸಾಧ್ಯತೆ ಇತ್ತು. ಸಂವಿಧಾನ ರಚನಕಾರರು ಪ್ರಜ್ಞಾಪೂರ್ವಕವಾಗಿ ಅವುಗಳನ್ನು ಹೊರಗಿಟ್ಟಿದ್ದಾರೆ ಎಂದು ವಾದಿಸಿದ್ದಾರೆ
ಯಾವುದು ಅಗತ್ಯ ಧಾರ್ಮಿಕತೆ ಎಂಬ ಪ್ರಶ್ನೆ ಹಿಂದೆ ಇತ್ತು. ಆನಂತರ ನ್ಯಾಯಾಂಗ ಧೋರಣೆಯಲ್ಲಿ ಬದಲಾವಣೆಯಾಯಿತು. ಈಗ (ಆಚರಣೆಯೊಂದು) 'ಅಗತ್ಯವಾಗಿ ಧಾರ್ಮಿಕವಾಗಿದ್ದರೂ' ಅದು 'ಧರ್ಮಕ್ಕೆ ಅಗತ್ಯವೇ' ಎನ್ನುವುದನ್ನು ನಿರೂಪಿಸಬೇಕಿದೆ ಎಂದು ಪ್ರಭುಲಿಂಗ ನಾವದಗಿ ವಾದ ಮಂಡಿಸುತ್ತಿದ್ದಾರೆ.