ಬೆಂಗಳೂರು, ಫೆ 21 (DaijiworldNews/KP): ಹೈಕೋರ್ಟ್ನ ಮಧ್ಯಂತರ ಆದೇಶವನ್ನು ಎಲ್ಲರು ಪಾಲನೆ ಮಾಡಬೇಕು. ಯಾರು ಮಧ್ಯಂತರ ಆದೇಶವನ್ನು ಪಾಲನೆ ಮಾಡೋದಿಲ್ಲವೋ ಅವರ ಮೇಲೆ ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳಬೇಕು ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಹೇಳಿದರು.
ಬೆಂಗಳೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಈಗ ಸಂಬಾಳಿಸುವ ಸಮಯ ಮುಗಿದಿದೆ, ಹೈಕೋರ್ಟ್ನ ಮಧ್ಯಂತರ ಆದೇಶವನ್ನು ಯಾರು ಪಾಲನೆ ಮಾಡುವುದಿಲ್ಲ ಅವರ ವಿರುದ್ದ ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳಬೇಕು ಎಂದು ಹೇಳಿದರು.
ಇದೇ ವೇಳೆ ಭಜರಂಗದಳದ ಕಾರ್ಯಕರ್ತನ ಹತ್ಯೆ ಪ್ರಕರಣದ ಬಗ್ಗೆ ಮಾತನಾಡಿದ ಅವರು, ಈ ಹಿಂದೆಯೂ ಶಿವಮೊಗ್ಗದಲ್ಲಿ ಈ ರೀತಿಯ ಘಟನೆಗಳು ನಡೆದಿದ್ದು, ಸರ್ಕಾರ ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಿ ಸಂಪೂರ್ಣ ತನಿಖೆ ನಡೆಸಬೇಕು ಎಂದರು.
ಮುಸ್ಲಿಂ ಗುಂಡಾಗಳು ಕೊಲೆ ಹಿಂದೆ ಇದ್ದಾರೆ ಎಂಬ ಈಶ್ವರಪ್ಪ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಈಶ್ವರಪ್ಪ ಹೇಳಿಕೆ ಕೊಟ್ಟಿದ್ದಾರೆ ಅಂದರೆ ಅದು ಗಂಭೀರವಾದ ಸಂಗತಿ. ಅವರು ಹೇಳಿದ ದಿಕ್ಕಿನತ್ತ ತನಿಖೆ ಮಾಡಬೇಕು. ಅಲ್ಲದೆ ಎಲ್ಲ ಗುಂಡಾಗಳನ್ನು ಬಂಧಿಸಿ ಒಳಗೆ ಹಾಕಿ ತನಿಖೆ ನಡೆಸಬೇಕು ಎಂದರು.
ಇನ್ನು ಕಾಂಗ್ರೆಸ್ ಅಹೋರಾತ್ರಿ ಧರಣಿ ವಿಚಾರದ ಕುರಿತು ಮಾತನಾಡಿದ ಅವರು, ಧರಣಿ ಮಾಡುವ ಹಕ್ಕಿದೆ ಮಾಡಲಿ, ಆದರೆ ಯಾಕೆ ಹೋರಾಟ ಮಾಡುತ್ತಿದ್ದಾರೆ ಎಂಬ ಸ್ಪಷ್ಟತೆ ಅವರಿಗಿಲ್ಲ ಎಂದರು.
ಹೈಕೋರ್ಟ್ ಆದೇಶವನ್ನು ವಿದ್ಯಾರ್ಥಿಗಳು ಪಾಲನೆ ಮಾಡಬೇಕಾ ಅಥವಾ ಬೇಡವ ಅನ್ನೋ ಸ್ಪಷ್ಟತೆ ಕಾಂಗ್ರೆಸ್ಗೆ ಇಲ್ಲ, ಅಲ್ಲದೆ ಈ ವಿಚಾರದಲ್ಲಿ ಮುಸ್ಲಿಂ ವಿದ್ಯಾರ್ಥಿನಿಯರ ವಿರುದ್ದ ಹೇಳಿಕೆ ನೀಡಿದರೆ ಎಲ್ಲಿ ಮತ ಕೈ ತಪ್ಪಿ ಹೋಗುತ್ತದೆ ಅನ್ನೊ ಭಯ ಅವರಿಗಿದೆ ಎಂದರು.
ಇನ್ನು ಕಾಂಗ್ರೆಸ್ನವರು ವಿದ್ಯಾರ್ಥಿಗಳು ಹೈಕೋರ್ಟ್ ಆದೇಶವನ್ನು ಪಾಲನೆ ಮಾಡಬೇಕು ಎಂದು ಬಾಯಿ ಬಿಟ್ಟು ಹೇಳಲಿ ನೋಡಣ. ಮೊದಲು ಹಿಜಾಬ್ ವಿಚಾರದಲ್ಲಿ ಅವರ ನಿಲುವು ಏನು ಅನ್ನೋದನ್ನ ತಿಳಿಸಲಿ ಎಂದು ಸವಾಲು ಹಾಕಿದರು.