ಹೈದರಬಾದ್, ಫೆ 21 (DaijiworldNews/MS): ಆಂಧ್ರಪ್ರದೇಶದ ಕೈಗಾರಿಕೆ, ವಾಣಿಜ್ಯ ಮತ್ತು ಮಾಹಿತಿ ತಂತ್ರಜ್ಞಾನ ಸಚಿವ ಸಚಿವ ಮೇಕಪತಿ ಗೌತಮ್ ರೆಡ್ಡಿ(49) ಹೃದಯಾಘಾತದಿಂದ ಮೃತಪಟ್ಟಿದ್ದಾರೆ.
ಗೌತಮ್ ರೆಡ್ಡಿ ಅವರಿಗೆ ಇಂದು ಬೆಳಗ್ಗೆ ಹಠಾತ್ ಹೃದಯಾಘಾತ ಉಂಟಾಗಿದೆ. ಈ ವೇಳೆ ಜೂಬ್ಲಿ ಹಿಲ್ಸ್ನ ಅಪೋಲೋ ಆಸ್ಪತ್ರೆಗೆ ರವಾನೆ ಮಾಡುತ್ತಿರುವಾಗಲೇ ದಾರಿಮಧ್ಯೆಯೇ ಅವರು ಕೊನೆಯುಸಿರೆಳೆದರು ಎಂದು ತಿಳಿದುಬಂದಿದೆ.
ಗೌತಮ್ ರೆಡ್ಡಿ ಒಂದು ವಾರದ ಹಿಂದಷ್ಟೇ ದುಬೈ ಎಕ್ಸ್ಪೋದಲ್ಲಿ ಪಾಲ್ಗೊಂಡು ವಿವಿಧ ಕಂಪನಿಗಳ ಜೊತೆ ಆಂಧ್ರಪ್ರದೇಶದಲ್ಲಿ ಹೂಡಿಕೆ ಮಾಡುವ ಒಪ್ಪಂದ ಕುದುರಿಸಿದ್ದರು. ನಿನ್ನೆಯಷ್ಟೇ ದುಬೈಯಿಂದ ಹೈದರಾಬಾದ್ಗೆ ಬಂದಿಳಿದಿದ್ದರು
ಅವರು 2019 ರ ಆಂಧ್ರಪ್ರದೇಶ ವಿಧಾನಸಭಾ ಚುನಾವಣೆ ಮತ್ತು 2014 ಆಂಧ್ರಪ್ರದೇಶ ವಿಧಾನಸಭಾ ಚುನಾವಣೆ ಎರಡರಲ್ಲೂ ಆತ್ಮಕೂರು ಕ್ಷೇತ್ರದಿಂದ ವಿಧಾನಸಭಾ ಸದಸ್ಯರಾಗಿ ಆಯ್ಕೆಯಾಗಿದ್ದರು. ಅವರು ನೆಲ್ಲೂರಿನ ಮಾಜಿ ಸಂಸದ ಮೇಕಪತಿ ರಾಜಮೋಹನ್ ರೆಡ್ಡಿ ಅವರ ಪುತ್ರರಾಗಿದ್ದಾರೆ