ಶಿವಮೊಗ್ಗ, ಫೆ 21 (DaijiworldNews/MS): ನಗರದ ಸೀಗೆಹಟ್ಟಿಯ ಹಿಂದೂಪರ ಸಂಘಟನೆಯ ಯುವಕನೊಬ್ಬನನ್ನು ದುಷ್ಕರ್ಮಿಗಳ ತಂಡವೊಂದು ಮಾರಕಾಸ್ತ್ರಗಳಿಂದ ಬರ್ಬರವಾಗಿ ಕೊಚ್ಚಿ ಕೊಲೆ ಮಾಡಿ ಪರಾರಿಯಾಗಿದ್ದಾರೆ.
ಹತ್ಯೆಯಾದ ಯುವಕನನ್ನು ಬಜರಂಗದಳದ ಕಾರ್ಯಕರ್ತ ಹರ್ಷ (24) ಎಂದು ಗುರುತಿಸಲಾಗಿದೆ. ಭಾನುವಾರ ರಾತ್ರಿ ೧೦ ಗಂಟೆ ಸುಮಾರಿಗೆ ಈ ಹತ್ಯೆ ನಡೆದಿದೆ. ದೊಡ್ಡಪೇಟೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ರಾತ್ರಿ 9.30ರ ಸುಮಾರಿಗೆ ಭಾರತಿ ಕಾಲೋನಿ ಬಳಿ ಚಹಾ ಕುಡಿಯುತ್ತಿದ್ದ ವೇಳೆ ಕಾರಿನಲ್ಲಿ ಬಂದ ದುಷ್ಕರ್ಮಿಗಳು ಅಟ್ಟಾಡಿಸಿಕೊಂಡು ಹೋಗಿ ಭರ್ಜಿಯಿಂದ ಚುಚ್ಚಿ ಕೊಲೆ ಮಾಡಿ ಪರಾರಿಯಾಗಿದ್ದಾರೆ.
ತೀವ್ರ ಗಾಯಗೊಂಡ ಹರ್ಷನನ್ನು ತಕ್ಷಣ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಿದರೂ ಬದುಕುಳಿಯಲಿಲ್ಲ. ವಿಷಯ ಎಲ್ಲೆಡೆ ಹಬ್ಬುತ್ತಿದ್ದಂತೆ ಆಸ್ಪತ್ರೆ ಬಳಿ ಅಪಾರ ಸಂಖ್ಯೆಯಲ್ಲಿ ಹಿಂದೂಪರ ಕಾರ್ಯಕರ್ತರು ಜಮಾಯಿಸಿದ್ದು, ಬಿಗುವಿನ ವಾತಾವರಣ ಉಂಟಾಗಿದೆ.
ಹತ್ಯೆ ಬಳಿಕ ಶಿವಮೊಗ್ಗದಲ್ಲಿ ಪ್ರಕ್ಷುಬ್ಧ ವಾತಾವರಣ ಉಂಟಾಗಿದ್ದು, ನಗರಾದ್ಯಂತ ಸೆಕ್ಷನ್ 144 ಜಾರಿಗೊಳಿಸಲಾಗಿದೆ. ನಗರದ ಎಲ್ಲ ಶಾಲಾ-ಕಾಲೇಜುಗಳಿಗೂ ನಾಳೆ ರಜೆ ಎಂದು ಘೋಷಿಸಲಾಗಿದೆ. ಇನ್ನೊಂದೆಡೆ ಕೆಲವು ಕಡೆ ಕಲ್ಲು ತೂರಾಟ ಕೂಡ ನಡೆದಿದ್ದು, ಪರಿಸ್ಥಿತಿ ನಿಯಂತ್ರಿಸಲು ಹೆಚ್ಚಿನ ಪೊಲೀಸರನ್ನು ನಿಯೋಜಿಸಲಾಗುತ್ತಿದೆ.