ದಂತೇವಾಡ, ಫೆ 20 (DaijiworldNews/HR): ಅನೇಕ ಹಿಂಸಾಚಾರ ಪ್ರಕರಣಗಳಲ್ಲಿ ಭಾಗಿಯಾಗಿದ್ದ ಆರೋಪಿಯ ತಲೆಗೆ ಐದು ಲಕ್ಷ ರೂ. ಬಹುಮಾನ ಘೋಷಿತವಾಗಿದ್ದ ನಕ್ಸಲೀಯನೊಬ್ಬ ಛತ್ತೀಸ್ಗಢದ ದಂತೇವಾಡ ಜಿಲ್ಲೆಯಲ್ಲಿ ಪೊಲೀಸರ ಎನ್ಕೌಂಟರ್ಗೆ ಹತನಾಗಿದ್ದಾನೆ ಎಂದು ತಿಳಿದು ಬಂದಿದೆ.
ಜಿಲ್ಲಾ ಮೀಸಲು ಕಾವಲು ಪಡೆ ಕಾರ್ಯಾಚರಣೆ ನಡೆಸುತ್ತಿದ್ದಾಗ ಈ ಗುಂಡಿನ ಚಕಮಕಿ ನಡೆದಿದ್ದು ಪೊಲೀಸರ ಗುಂಡೇಟಿಗೆ ಲಖ್ಮಾ ಸೋದಿ(34) ಬಲಿಯಾಗಿದ್ದಾನೆ. ಈತನ ತಲೆಗೆ ಐದು ಲಕ್ಷ ರೂ. ಬಹುಮಾನ ಘೋಷಿಸಲಾಗಿತ್ತು..
ಸೋದಿ ಮಾವೋವಾದಿ ಸಂಘಟನೆಯ ಚಟುವಟಿಕೆಗಳಲ್ಲಿ ಸಕ್ರಿಯನಾಗಿದ್ದು, ಈತ ಮಲಂಗೇರ್ ಪ್ರದೇಶ ಮಾವೋವಾದಿ ಸಮಿತಿಯ ಉಸ್ತುವಾರಿ ಕಮಾಂಡರ್ ಆಗಿದ್ದ ಎನ್ನಲಾಗಿದೆ.
ಇನ್ನು ಮೃತನಿಂದ ಒಂದು ಪಿಸ್ತೂಲ್, 5 ಕೆಜಿ ಟಿಫಿನ್ ಬಾಂಬ್, ನಕ್ಸಲ್ ಸಮವಸ್ತ್ರ, ವಿದ್ಯುತ್ ವೈರ್ಗಳು, ವೈರ್ ಕಟರ್, ನಕ್ಸಲ್ ಸಾಹಿತ್ಯ ಮತ್ತು ಕೆಲವು ಕ್ಯಾಂಪಿಂಗ್ ಸಾಮಗ್ರಿಗಳನ್ನು ವಶಪಡಿಸಿಕೊಳ್ಳಲಾಗಿದೆ.