ಹರಿಹರ, ಫೆ 20 (DaijiworldNews/KP): ಕಾಶಿಯ ಗಂಗಾ ಆರತಿ ಮಾದರಿಯಲ್ಲಿ ದಕ್ಷಿಣದಲ್ಲಿ ತುಂಗಾ ಆರತಿ ಮಂಟಪಗಳನ್ನು ನಿರ್ಮಿಸಲು ಸರ್ಕಾರ ಯೋಜನೆ ಹಾಕಿಕೊಂಡಿದ್ದು, ಇದಕ್ಕಾಗಿ ಹರಿಹರದ ತುಂಗಭದ್ರಾ ನದಿಯ ತಟದಲ್ಲಿ 108 ಯೋಗ ಮಂಟಪಗಳ ನಿರ್ಮಾಣ ಕಾರ್ಯಕ್ಕೆ ಭಾನುವಾರ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿಯವರು ಶಿಲಾನ್ಯಾಸ ನೆರವೇರಿಸಿದರು.
ಈ ವೇಳೆ ಮಾತನಾಡಿದ ಅವರು, ನನ್ನ ಪ್ರಕಾರ ವಿಜ್ಞಾನ ಮತ್ತು ತತ್ವಜ್ಞಾನ ಒಂದೇ ನಾಣ್ಯದ ಎರಡು ಮುಖಗಳು. ಒಂದಕ್ಕೊಂದು ಪೂರಕವಾದದ್ದು. ಇದನ್ನು ಎಲ್ಲರೂ ಅರ್ಥಮಾಡಿಕೊಂಡು ಮುನ್ನಡೆಯಬೇಕು. ಅಣು ಒಡೆದಾಗ ಒಂದು ಶಕ್ತಿ ಉತ್ಪಾದನೆಯಾಗುತ್ತದೆ. ಅಣುಗಳು ಕೂಡಿದಾಗ ಅಮೋಘ ಶಕ್ತಿ ಉತ್ಪಾದನೆಯಾಗುತ್ತದೆ. ಅದೇ ರೀತಿ ಹರಿಹರ ಕ್ಷೇತ್ರ ಹರಿ ಮತ್ತು ಹರ ಸಂಗಮದ ಶಕ್ತಿ ಹೊಂದಿದೆ ಎಂದರು.
ಇನ್ನು ನಮ್ಮ ಎಲ್ಲ ನಾಗರಿಕತೆಗಳು ನದಿ ತಟದಲ್ಲಿಯೇ ಬೆಳೆದಿವೆ. ಹಾಗಾಗಿ ನಾಗರಿಕತೆ ಮತ್ತು ಸಂಸ್ಕೃತಿ ಎರಡು ಒಟ್ಟಿಗೆ ಬೆಳೆಯಬೇಕು, ಇನ್ನು ನಮ್ಮಲ್ಲಿ ಏನಿದೆಯೋ ಅದು ನಾಗರಿಕತೆ. ನಾವೇನು ಆಗಿದ್ದೇವೆಯೋ ಅದು ಸಂಸ್ಕೃತಿ ಎಂದರು.
ಮಾನವೀಯ ಗುಣಗಳು, ಉದಾರತೆಯ ಗುಣಗಳು ಸಹಿತ ಎಲ್ಲ ಗುಣಗಳು ಸಂಸ್ಕೃತಿಯಾದರೆ, ರಸ್ತೆ, ಕಟ್ಟಡ, ತಂತ್ರಜ್ಞಾನ ಎಲ್ಲವೂ ನಾಗರಿಕತೆ. ನದಿತಟದಲ್ಲಿ ಸಂಸ್ಕೃತಿ ಮತ್ತು ನಾಗರಿಕತೆ ಎರಡನ್ನೂ ಬೆಳೆಸಬೇಕಾಗಿದ್ದು ಇಂತಹ ಒಳ್ಳೆಯ ಕಾರ್ಯಕ್ರಮವನ್ನು ವಚನಾನಂದ ಸ್ವಾಮೀಜಿ ಹಮ್ಮಿಕೊಂಡಿದ್ದಾರೆ ಎಂದು ಸಿಎಂ ಹೇಳಿದರು.
ಇನ್ನು ತುಂಗಾ ನದಿ ನಮ್ಮ ಬದುಕಿನ ಮೂಲ ಜಲ. ಆದ್ದರಿಂದ ಜಲ ರಕ್ಷಣೆ ಹಾಗೂ ಸ್ವಚ್ಛತೆ ನಮ್ಮ ಆದ್ಯತೆಯಾಗಬೇಕು, ಅಲ್ಲದೆ ಕಾಶಿಯ ರೀತಿ ಇಲ್ಲಿಯೂ ಅಭಿವೃದ್ಧಿಗಳು ನಡೆಯಬೇಕು ಎಂಬುದು ಶ್ರೀಗಳ ಅಭಿಲಾಷೆ ಆಗಿದೆ ಎಂದು ಹೇಳಿದರು.
ತುಂಗಭದ್ರಾರತಿ ಯೋಜನೆಯ ಮೊದಲ ಭಾಗವಾಗಿ 30 ಕೋಟಿ ರೂ. ಅನುದಾನ ಮಂಜೂರಾಗಿದ್ದು, ಇದರಲ್ಲಿ ರಾಘವೇಂದ್ರ ಮಠದಿಂದ ಹರಿಹರೇಶ್ವರ ದೇವಸ್ಥಾನದ ಮಧ್ಯದ ನದಿ ದಡದುದ್ದಕ್ಕೂ ಯೋಗಾ ಮಂಟಪಗಳನ್ನು ನಿರ್ಮಿಸಲಾಗುತ್ತಿದೆ.
ಈ ವೇಳೆ ಮಾತನಾಡಿದ ವಚನಾನಂದ ಸ್ವಾಮೀಜಿಯವರು, ಉತ್ತರಕ್ಕೆ ಗಂಗೆಯ ರೀತಿ ದಕ್ಷಿಣ ಭಾರತಕ್ಕೆ ತುಂಗಾ ನದಿ ಪವಿತ್ರ ಎನಿಸಿದ್ದು, ಗಂಗಾ ಆರತಿಯಂತೆ ಪ್ರತಿನಿತ್ಯ ತುಂಗಾಭದ್ರಾ ಆರತಿ, ಪೂಜೆ ನಡೆಸುವ ಉದ್ದೇಶವಿದ್ದು, ಇದು ಉತ್ತರ ಮತ್ತು ದಕ್ಷಿಣ ಕರ್ನಾಟಕ ಒಂದೂಗೂಡಿಸುವ ಮಹತ್ವದ ಯೋಜನೆಯಾಗಲಿದೆ ಎಂದರು.
ಇನ್ನು ಹರಿಹರೇಶ್ವರ ಸನ್ನಿಧಿಯಿರುವ ಹರಿಹರ ಇತಿಹಾಸ ಹೊಂದಿದ್ದು, ಇದರ ಗತ ವೈಭವವನ್ನು ಈಗ ಮರಳಿ ಪಡೆಯುವ ಮತ್ತು ದೇಶದಲ್ಲೇ ಹಿಂದುಗಳ ಪ್ರಮುಖ ಯಾತ್ರಾಸ್ಥಳವನ್ನಾಗಿಸುವ ಗುರಿಯೊಂದಿಗೆ ಈ ಯೋಜನೆ ಆರಂಭಿಸಲಾಗುತ್ತಿದೆ ಎಂದರು.
ಗಂಗಾ ಸ್ನಾನ-ತುಂಗಾ ಪಾನ ಎನ್ನುವ ಉಕ್ತಿಯೂ ಇರುವುದರಿಂದ ಗಂಗಾರತಿಯಂತೆ ತುಂಗಾರತಿಯನ್ನು ಏಕೆ ಆರಂಭಿಸಬಾರದು, ಜೊತೆಗೆ ಗಂಗೆಯಂತೆ ತುಂಗಾ ನದಿಯನ್ನೂ ಶುಚಿಗೊಳಿಸಬೇಕೆನ್ನುವ ಮಹತ್ವಾಕಾಂಕ್ಷೆ ಬಂದಾಗ ಈ ಹಿಂದೆ ನಮಾಮಿ ತುಂಗೆ ಯೋಜನೆಗೆ ಚಾಲನೆ ನೀಡಿದ್ದೇವು. ಇನ್ನು ಗಂಗಾರತಿ ಸಮಯದಲ್ಲಿ ಲಕ್ಷಾಂತರ ಭಕ್ತರ ಮನಸ್ಸು ಸೆಳೆಯಿತೋ ಹಾಗೆ ತುಂಗಾರತಿ ಕೂಡ ನಾಡಿನ ಭಕ್ತರ ಮನಸ್ಸು ಸೆಳೆಯಬೇಕು ಎಂದು ಅವರು ಹೇಳಿದರು.