ಲಖನೌ, ಫೆ 20 (DaijiworldNews/KP): ಬಿಜೆಪಿ ನಾಯಕರು ಸುಳ್ಳನ್ನು ಬಿಟ್ಟು ಬೇರೇನೂ ಹೇಳುವುದಿಲ್ಲ ಎಂದು ಮತ್ತೆ ಸಾಬೀತು ಮಾಡಿದ್ದಾರೆ ಎಂದು ಅಖಿಲೇಶ್ ಯಾದವ್ ಬಿಜೆಪಿ ಹೇಳಿಕೆಗೆ ತಿರುಗೇಟು ನೀಡಿದರು.
ಲಖನೌ ಮತ್ತು ಕಾನ್ಪುರದಲ್ಲಿ ನಡೆದ ಚುನಾವಣಾ ಸಮಾವೇಶದಲ್ಲಿ ಸಮಾಜವಾದಿ ಪಕ್ಷ ದ ವಿರುದ್ದ ವಾಗ್ದಾಳಿ ನಡೆಸಿದ ಯೋಗಿ, ಉಗ್ರನ ತಂದೆ ಸಮಾಜವಾದಿ ಪಕ್ಷದೊಂದಿಗೆ ಸಂಬಂಧ ಹೊಂದಿದ್ದಾರೆ. ಹಾಗೆಯೇ, ಸಮಾಜವಾದಿ ಪಕ್ಷವು ಉಗ್ರರನ್ನು ರಕ್ಷಿಸುತ್ತಿದೆ ಎಂದು ಅರೋಪಿಸಿದ್ದರು.
ಇನ್ನು 2008ರ ಅಹಮದಾಬಾದ್ ಸ್ಫೋಟದಲ್ಲಿ ಭಾಗಿಯಾಗಿದ್ದ ಭಯೋತ್ಪಾದಕನ ತಂದೆಯೊಬ್ಬರು ಅಖಿಲೇಶ್ ಯಾದವ್ ಜೊತೆ ನಿಂತಿರುವ ಫೋಟೋವೊಂದನ್ನು ಉಲ್ಲೇಖಿಸಿ,ಬಾಯಲ್ಲಿ ರಾಮನಾಮ, ನಿಂತಿರುವುದು ಭಯೋತ್ಪಾದಕರ ಪರ. ಇದು ಸಮಾಜವಾದಿ ಪಕ್ಷವಲ್ಲ, ಸಮಾಜ ವಿರೋಧಿ ಪಕ್ಷ ಎಂದು ಅನುರಾಗ್ ಠಾಕೂರ್ ಆರೋಪಿಸಿದ್ದರು.
ಈ ವಿಚಾರದ ಕುರಿತು ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಅಖಿಲೇಶ್ ಯಾದವ್, ರಾಜಕೀಯದಲ್ಲಿ ಸುಳ್ಳು ಹೇಳುವವರು ಇದ್ದಾರೆ ಎಂದರೆ ಅದು ಬಿಜೆಪಿಯವರೇ ಆಗಿರುತ್ತಾರೆ ಎಂದು ಹಲವು ದಿನಗಳಿಂದ ಹೇಳುತ್ತಾ ಬಂದಿದ್ದೇನೆ, ಅಲ್ಲದೆ ಬಿಜೆಪಿ ನಾಯಕರು ಸುಳ್ಳನ್ನು ಬಿಟ್ಟು ಬೇರೇನೂ ಹೇಳುವುದಿಲ್ಲ ಎಂದು ಮತ್ತೆ ಸಾಬೀತು ಮಾಡಿದ್ದಾರೆ ಎಂದು ತಿರುಗೇಟು ನೀಡಿದರು.
ಅಲ್ಲದೆ ತಮಗೂ, ತಮ್ಮ ಪಕ್ಷಕ್ಕೂ ಉಗ್ರರು ಅಥವಾ ಉಗ್ರರ ಕುಟುಂಬದವರೊಂದಿಗೆ ಯಾವುದೇ ಸಂಬಂಧವಿಲ್ಲ ಎಂದು ಸ್ಪಷ್ಟಪಡಿಸಿದರು.
ಇನ್ನು 2008ರಲ್ಲಿ ಅಹಮದಾಬಾದ್ನಲ್ಲಿ ನಡೆದ ಬಾಂಬ್ ದಾಳಿ ಪ್ರಕರಣಗಳಲ್ಲಿ 56 ಮಂದಿ ಮೃತಪಟ್ಟು 200ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದರು.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆ ನಡೆಸಿದ್ದ ವಿಶೇಷ ನಿಯೋಜಿತ ನ್ಯಾಯಾಲಯವು, 28 ಮಂದಿಯನ್ನು ಖುಲಾಸೆಗೊಳಿಸಿ, 49 ಮಂದಿಯನ್ನು ತಪ್ಪಿತಸ್ಥರು ಎಂದು ಫೆಬ್ರುವರಿ 8 ರಂದು ತೀರ್ಪು ನೀಡಿತ್ತು. ಫೆಬ್ರುವರಿ 18ರಂದು, 38 ಅಪರಾಧಿಗಳಿಗೆ ಮರಣದಂಡನೆ, 11 ಅಪರಾಧಿಗಳಿಗೆ ಜೀವಾವಧಿ ಶಿಕ್ಷೆ ಪ್ರಕಟಿಸಿತ್ತು.