ಬೆಂಗಳೂರು, ಫೆ 20 (DaijiworldNews/MS): ರಾಷ್ಟ್ರಧ್ವಜಕ್ಕೆ ಅಪಮಾನ ಮಾಡಿರುವ ಸಚಿವ ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್. ಈಶ್ವರಪ್ಪ ಸಂಪುಟದಿಂದ ಕೈಬಿಡುವಂತೆ ಕಾಂಗ್ರೆಸ್ ನಾಯಕರು ನಡೆಸುತ್ತಿರುವ ಅಹೋರಾತ್ರಿ ಧರಣಿ ನಾಲ್ಕನೇ ದಿನಕ್ಕೆ ಕಾಲಿಟ್ಟಿದೆ. ಈಶ್ವರಪ್ಪ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡುವವರೆಗೂ ಹೋರಾಟ ಮುಂದುವರಿಸಲು ತೀರ್ಮಾನ ಮಾಡಿದ್ದಾರೆ.
ಈ ವಿಚಾರವಾಗಿ ಮಾತನಾಡಿರುವ ಡಿ.ಕೆ ಶಿವಕುಮಾರ್ "ಈಶ್ವರಪ್ಪನವರ ವಿರುದ್ಧ ರಾಷ್ಟ್ರದ್ರೋಹದ ಪ್ರಕರಣ ದಾಖಲಿಸಿ ಅವರನ್ನು ಸಂಪುಟದಿಂದ ವಜಾ ಮಾಡಬೇಕು. ಸಿಎಂ ಸಹಿತವಾಗಿ ಕೆಲವು ಬಿಜೆಪಿ ಮುಖಂಡರು ಈಶ್ವರಪ್ಪರನ್ನ ಸಮರ್ಥಿಸುತ್ತಿರುವುದಕ್ಕೆ ನಮ್ಮ ಖಂಡನೆ ಇದೆ. ಇವರ ವಿರುದ್ದ ಪ್ರಕರಣ ದಾಖಲಿಸಿಲ್ಲ, ಆದರೆ ಆ ವಿದ್ಯಾರ್ಥಿಗಳು ಏನು ತಪ್ಪು ಮಾಡಿದ್ದಾರೆ ಎಂದು ಅವರ ಮೇಲೆ ಪ್ರಕರಣ ದಾಖಲಿಸಿದ್ದೀರಿ? ರಾಜ್ಯದಲ್ಲಿ ಅಶಾಂತಿ ಮೂಡಿಸುವುದಕ್ಕೆ ಪ್ರಯತ್ನಿಸುತ್ತಿದ್ದೀರಿ " ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕೆಂಪುಕೋಟೆ ಮೇಲೆ ಕೇಸರಿ ಧ್ವಜ ಹಾರಿಸುತ್ತೇವೆ ಎಂದು ದೇಶದ್ರೋಹಿ ಹೇಳಿಕೆ ಕೊಟ್ಟಿರುವ ಸಚಿವರನ್ನು ಇಂದು ಬಿಜೆಪಿ ನಾಯಕರು ಸಮರ್ಥಿಸಿಕೊಳ್ಳುತ್ತಿದ್ದಾರೆ. ಸಚಿವ ಕೆ.ಎಸ್.ಈಶ್ವರಪ್ಪರನ್ನ ವಜಾ ಮಾಡಬೇಕು. ಮುಖ್ಯಮಂತ್ರಿಗೆ ಸ್ವಾಭಿಮಾನ ಇದ್ದಿದ್ದರೆ ಅಂದೇ ವಜಾ ಮಾಡಬೇಕಿತ್ತು. ಸರ್ಕಾರದಲ್ಲಿ ಈಶ್ವರಪ್ಪಗೆ ಯಾರ ಬಗ್ಗೆಯೂ ನಿಷ್ಠೆ ಇಲ್ಲ. ಈಶ್ವರಪ್ಪರನ್ನ ವಜಾ ಮಾಡದಿದ್ದರೆ ನಮ್ಮ ಹೋರಾಟವನ್ನು ಜಿಲ್ಲಾ, ತಾಲೂಕು ಮಟ್ಟದಲ್ಲಿ ಮುಂದುವರಿಸುತ್ತೇವೆ ಎಂದು ಸವಾಲು ಹಾಕಿದ್ದಾರೆ