ಅಮೃತಸರ, ಫೆ 20 (DaijiworldNews/MS): ಅಮೃತಸರದ ಸಯಾಮಿ ಅವಳಿಗಳಾದ ಸೊಹ್ನಾ ಸಿಂಗ್ ಮತ್ತು ಮೊಹ್ನಾ ಸಿಂಗ್ ಅವರು ಭಾನುವಾರ ಪಂಜಾಬ್ ಅಸೆಂಬ್ಲಿ ಚುನಾವಣೆಯಲ್ಲಿ ಪ್ರತ್ಯೇಕ ಮತದಾರರಾಗಿ ಮೊದಲ ಬಾರಿಗೆ ಮತ ಚಲಾಯಿಸಿದ್ದಾರೆ.
ಪಂಜಾಬ್ನ ಅಮೃತ್ಸರ್ನ ಮನಾವಾಲಾದ ಬೂತ್ ನಂಬರ್ 101ರಲ್ಲಿ ಸೊಹ್ನಾ ಮತ್ತು ಮೊಹ್ನಾ ಎಂಬ ಸಯಾಮಿ ಅವಳಿಗಳು ಮತದಾನ ಮಾಡಿ ಗಮನ ಸೆಳೆದರು. ಇವರಿಬ್ಬರ ದೇಹ ಒಂದಕ್ಕೊಂದು ಹೊಂದಿಕೊಂಡಿದ್ದರೂ ಕೂಡ ಇಬ್ಬರೂ ಪ್ರತ್ಯೇಕ ಮತದಾರರಾಗಿದ್ದರಿಂದ ಇದೊಂದು ವಿಶೇಷ ಕೇಸ್ ಎಂದು ಚುನಾವಣಾ ಆಯೋಗದ ಅಧಿಕಾರಿಗಳು ತಿಳಿಸಿದ್ದಾರೆ.
ಮತದಾನದ ಗೌಪ್ಯತೆಯನ್ನು ಕಾಪಾಡಲು ಸಯಾಮಿ ಅವಳಿಗಳಿಗೆ ಕನ್ನಡಕದ ವ್ಯವಸ್ಥೆ ಮಾಡಲಾಗಿತ್ತು ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಜೂನ್ 14, 2003ರಲ್ಲಿ ದಿಲ್ಲಿಯ ಸುಚೇತಾ ಕೃಪಲಾನಿ ಆಸ್ಪತ್ರೆಯಲ್ಲಿ ಜನಿಸಿದ ಈ ಸಯಾಮಿ ಅವಳಿಗಳನ್ನು ಅವರ ಹೆತ್ತವರು ತ್ಯಜಿಸಿದ್ದರು. ನಂತರ ಅವರನ್ನು ಏಮ್ಸ್ ಆಸ್ಪತ್ರೆಗೆ ದಾಖಲಿಸಲಾಯಿತು. ಅವರನ್ನು ಪ್ರತ್ಯೇಕಿಸಿದರೆ ಜೀವಕ್ಕೆ ಅಪಾಯವೆಂದು ವೈದ್ಯರು ಶಸ್ರ್ರಕ್ರಿಯೆ ನಡೆಸಿರಲಿಲ್ಲ ನಂತರ ಪಿಂಗಲ್ವಾರ ಚ್ಯಾರಿಟೇಬಲ್ ಸೊಸೈಟಿಯನ್ನು ಸಂಪರ್ಕಿಸಿ ಅವರನ್ನು ಅಲ್ಲಿಗೆ ಕರೆದುಕೊಂಡು ಹೋಗಲಾಗಿತ್ತು.
ಅಮೃತಸರದ ಪಿಂಗಲ್ವಾರ ಚ್ಯಾರಿಟೇಬಲ್ ಸೊಸೈಟಿಯಲ್ಲಿ ಬೆಳೆದ ಈ ಸಯಾಮಿ ಅವಳಿಗಳಿಗೆ ಎರಡು ಹೃದಯ ಎರಡು ಜತೆ ಕೈಗಳು, ಎರಡು ಕಿಡ್ನಿ ಹಾಗೂ ಎರಡು ಬೆನ್ನು ಹುರಿ ಹಾಗೂ ಮೆದುಳು ಇವೆ. ಆದರೆ ಅವರು ಒಂದೇ ಲಿವರ್, ಪಿತ್ತಕೋಶ, ಸ್ಪ್ಲೀನ್ ಮತ್ತು ಒಂದು ಜತೆ ಕಾಲುಗಳನ್ನು ಹೊಂದಿದ್ದಾರೆ.
ಖ್ಯಾತ ಲೇಖಕ ಹಾಗೂ ದಾನಿ ಭಗತ್ ಪುರಾಣ್ ಸಿಂಗ್ ಅವರು ಸ್ಥಾಪಿಸಿದ್ದ ಈ ಸೊಸೈಟಿಯ ಪೋಷಕ ಅಧ್ಯಕ್ಷ ಡಾ. ಇಂದರ್ಜಿತ್ ಕೌರ್ ಈ ಅವಳಿಗಳಿಗೆ ಸೊಹ್ನಾ ಮತ್ತು ಮೊಹ್ನಾ ಎಂಬ ಹೆಸರಿಟ್ಟಿದ್ದರು. ಈ ಸಯಾಮಿ ಅವಳಿಗಳಿಗೆ ಸಂಗೀತವೆಂದರೆ ಇಷ್ಟ ಹಾಗೂ ಅವರು ಹಾರ್ಮೋನಿಯಂ ಕೂಡ ನುಡಿಸಬಲ್ಲರು