ಬೆಂಗಳೂರು, ಫೆ 20 (DaijiworldNews/MS): ಆರೋಗ್ಯ ಇಲಾಖೆಯ 108 ಅಂಬ್ಯುಲೆನ್ಸ್ ಗಳು ಸದ್ಯದಲ್ಲೇ ಹೊಸ ಸ್ವರೂಪದಲ್ಲಿ ರಸ್ತೆಗಿಳಿಯಲಿವೆ. ವಿಶ್ವದರ್ಜೆಯ ಸೇವೆ ನೀಡುವ ನಿಟ್ಟಿನಲ್ಲಿ ಇವುಗಳನ್ನು ಮೇಲ್ದರ್ಜೆಗೇರಿಸಲು ಸರ್ಕಾರ ನಿರ್ಧರಿಸಿದೆ.
ಈ ಕುರಿತು ಮಾತನಾಡಿರುವ ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್," 108ರ ಸೇವೆಯನ್ನು ಆಧುನಿಕ ತಂತ್ರಜ್ಞಾನದ ಬಳಕೆಯೊಂದಿಗೆ ಮೇಲ್ದರ್ಜೆಗೇರಿಸುವ ಮಹತ್ವದ ಯೋಜನೆಗೆ ರಾಜ್ಯ ಸರ್ಕಾರ ಆಡಳಿತಾತ್ಮಕ ಅನುಮೋದನೆ ನೀಡಿದೆ" ಎಂದು ತಿಳಿಸಿದ್ದಾರೆ.
ಹಲವು ಸಂದರ್ಭಗಳಲ್ಲಿ ರೋಗಿಯ ಜೀವ ಉಳಿಸಲು 'ಗೋಲ್ಡನ್ ಅವರ್' ತುಂಬಾ ಮಹತ್ವದ್ದಾಗಿರುತ್ತದೆ. ಈ ಅವಧಿಯಲ್ಲಿ ವ್ಯಕ್ತಿಗೆ ಸರಿಯಾದ ಚಿಕಿತ್ಸೆ ನೀಡಿದರೆ ಆತನ/ಆಕೆಯ ಜೀವ ಉಳಿಯುತ್ತದೆ. ಅದಕ್ಕಾಗಿಯೇ ಆಂಬ್ಯುಲೆನ್ಸ್ ಸೇವೆಯಲ್ಲಿ ಅಮೂಲಾಗ್ರ ಬದಲಾವಣೆಗೆ ಸರ್ಕಾರ ಮುನ್ನುಡಿ ಬರೆದಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.
ರಾಜ್ಯದಲ್ಲಿ 108-ಆರೋಗ್ಯ ಕವಚವು ತುರ್ತು ಆರೋಗ್ಯ ಸೇವೆಯನ್ನು ನೀಡುತ್ತಿದೆ. ಆಧುನಿಕ ಕಾಲದ ಆರೋಗ್ಯ ಸೇವೆಯ ಬೇಡಿಕೆಗಳಿಗೆ ಅನುಗುಣವಾಗಿ ಆಂಬ್ಯುಲೆನ್ಸ್ ಸೇವೆಯನ್ನು ಉನ್ನತೀಕರಿಸುವ ಅಗತ್ಯತೆ ಕಂಡುಬಂದಿದೆ. ಆಂಬ್ಯುಲೆನ್ಸ್ ನಲ್ಲಿ ಜಿಪಿಎಸ್ ಟ್ರಾಕಿಂಗ್ ಬಯೋಮೆಟ್ರಿಕ್ ಹಾಜರಾತಿ, ಸೇವೆಯ ಲೈವ್ ಸ್ಟ್ರೀಮಿಂಗ್ ಮುಂತಾದವುಗಳು ಕಮಾಂಡ್ ಸೆಂಟರ್ ನಲ್ಲಿರಲಿದೆ ಎಂದು ಹೇಳಿದ್ದಾರೆ
ಸರ್ಕಾರ ಆರೋಗ್ಯ ಕರ್ನಾಟಕ ನಿರ್ಮಿಸುವ ಉದ್ದೇಶದಿಂದ ಆರೋಗ್ಯ ವಲಯವನ್ನು ಎಲ್ಲಾ ಆಯಾಮಗಳಿಂದ ಅಭಿವೃದ್ಧಿಪಡಿಸುವ ಮಹತ್ವಕಾಂಕ್ಷೆ ಹೊಂದಿದೆ. ಈ ಹಿನ್ನೆಲೆಯಲ್ಲಿ, ತುರ್ತು ಆರೋಗ್ಯ ಸೇವೆಗೆ ಹೆಚ್ಚು ಆದ್ಯತೆ ನೀಡಿದೆ ಸಚಿವ ಡಾ.ಕೆ.ಸುಧಾಕರ್ ತಿಳಿಸಿದ್ದಾರೆ