ಬೆಂಗಳೂರು, ಫೆ 19 (DaijiworldNews/HR): ನಾವು ವಿಧಾನಸಭೆಯಲ್ಲಿ ಅಹೋರಾತ್ರಿ ಧರಣಿಯನ್ನು ಎರಡು ದಿನ ಪೂರೈಸಿದ್ದು, ಧರಣಿ ಮೂರನೇ ದಿನಕ್ಕೆ ಕಾಲಿಟ್ಟಿದೆ. ನಮ್ಮ ಆಗ್ರಹ ಈಡೇರುವವರೆಗೂ ನಾವು ಅಧಿವೇಶನ ನಡೆಯಲು ಬಿಡುವುದಿಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಹೇಳಿದ್ದಾರೆ.
ಈ ಕುರಿತು ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾವು ಬಚ್ಚಲು ಬಾಯಿ ಈಶ್ವರಪ್ಪನ ರಾಜೀನಾಮೆ ಕೇಳುತ್ತಿಲ್ಲ. ಅವನನ್ನು ವಜಾ ಮಾಡಬೇಕು ಎಂದು ಆಗ್ರಹಿಸುತ್ತಿದೇವೆ. ನಮ್ಮ ಆಗ್ರಹ ಈಡೇರುವವರೆಗೂ ನಾವು ಅಧಿವೇಶನ ನಡೆಯಲು ಬಿಡುವುದಿಲ್ಲ. ರಾಷ್ಟ್ರಧ್ವಜಕ್ಕೆ ಅಪಮಾನ ಮಾಡಿ, ಈಗ ದೊಡ್ಡ ಸಾಧನೆ ಮಾಡಿರುವಂತೆ ಬೀಗುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದ್ದಾರೆ.
ಇನ್ನು ನಾವು ಅಧಿವೇಶನದ ಸಮಯದಲ್ಲಿ ರಾಷ್ಟ್ರಧ್ವಜ ಹಾರಿಸಿ ತಪ್ಪು ಮಾಡಿದ್ದರೆ ನಮ್ಮ ಮೇಲೆ ಕೇಸ್ ದಾಖಲಿಸಲಿ. ಕಾನೂನು ಕ್ರಮ ಕೈಗೊಳ್ಳಲಿ. ಇನ್ನು ಯಾಕೆ ದಾಖಲಿಸಿಲ್ಲ? ಅದಕ್ಕಿಂತ ಮೊದಲು ದೇಶದ ಧ್ವಜಕ್ಕೆ ಅಪಮಾನ ಮಾಡಿರುವ ಈತನ ವಿರುದ್ಧ ದೇಶದ್ರೋಹದ ಪ್ರಕರಣ ದಾಖಲಿಸಲಿ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.