ಬೆಂಗಳೂರು, ಫೆ 19 (DaijiworldNews/KP): ಆರೆಸ್ಸೆಸ್ನವರಿಗೆ ತ್ರಿವರ್ಣ ಧ್ವಜದ ಮೇಲೆ ಗೌರವ, ಪ್ರೀತಿ ಇಲ್ಲ, ಆದರೆ ಆರೆಸ್ಸೆಸ್ನವರು ಈಶ್ವರಪ್ಪ ಮೂಲಕ ಮಾಡಿಸುತ್ತಿದ್ದಾರೆ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಆರೋಪಿಸಿದರು.
ರಾಷ್ಟ್ರಧ್ವಜದ ಬಗ್ಗೆ ಈಶ್ವರಪ್ಪ ಹೇಳಿಕೆ ಬಗ್ಗೆ ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಆರೆಸ್ಸೆಸ್ನವರಿಗೆ ತ್ರಿವರ್ಣ ಧ್ವಜದ ಮೇಲೆ ಗೌರವ ಇಲ್ಲ, ಈಶ್ವರಪ್ಪ ಪೆದ್ದ. ಈ ಪೆದ್ದನ ಕೈಯಲ್ಲಿ ಆರೆಸ್ಸೆಸ್ನವರು ಈ ಕೆಲಸವನ್ನು ಮಾಡಿಸುತ್ತಿದ್ದಾರೆ ಎಂದು ಹೇಳಿದರು.
ರಾಜ್ಯ ಸರ್ಕಾರ ಸದನದಲ್ಲಿ ಈಶ್ವರಪ್ಪ ಅವರ ವಿಚಾರದ ಬಗ್ಗೆ ಚರ್ಚೆ ಮಾಡುವುದನ್ನು ಬಿಟ್ಟು, ಸರ್ಕಾರದ ಉತ್ತರ ಕೇಳಿಕೊಂಡು ಕುಳಿತುಕೊಳ್ಳಲು ಆಗುತ್ತದೆಯೇ?. ಆದರೆ ಸದನದಲ್ಲಿ ಮೊದಲು ಈ ವಿಚಾರದ ಬಗ್ಗೆ ಚರ್ಚೆ ಬಳಿಕ ಇತರ ವಿಚಾರಗಳನ್ನು ಮಾತನಾಡಬಹುದಿತ್ತು ಎಂದರು.
ಇನ್ನು ಈಶ್ವರಪ್ಪ ಅವರ ರಾಜೀನಾಮೆ ಪಡೆಯಬೇಕು. ಎಲ್ಲ ಜಿಲ್ಲಾ ಹಾಗೂ ತಾಲ್ಲೂಕು ಕೇಂದ್ರದಲ್ಲಿ ಸೋಮವಾರ ಪಕ್ಷದ ಕಾರ್ಯಕರ್ತರು ಹೋರಾಟ ಮಾಡುತ್ತಾರೆ. ಈಶ್ವರಪ್ಪ ಹೇಳಿಕೆ ವಿಚಾರವನ್ನು ಅಧಿವೇಶನದಲ್ಲಿ ಚರ್ಚೆಗೆ ಮಾಡಬೇಕು ಎಂದು ಆಗ್ರಹಿಸಿದರು.
ಅಧಿವೇಶನ ನಡೆಯುವವರೆಗೂ ಅಹೋರಾತ್ರಿ ಧರಣಿ ಮುಂದುವರಿಯಲಿದೆ. ಒಂದು ವೇಳೆ ಸರ್ಕಾರ ಅಧಿವೇಶನ ಮುಂದೂಡಿದರೆ ನಾವು ಜನರ ಬಳಿ ಹೋಗುತ್ತೇವೆ. ಈ ಸರ್ಕಾರದ ನಡವಳಿಕೆ ಬಗ್ಗೆ ಜನರೇ ತೀರ್ಮಾನಿಸುತ್ತಾರೆ ಎಂದು ಹೇಳಿದರು.
ಅಲ್ಲದೆ ಇದು 130 ಕೋಟಿ ಜನರ ಭಾವನೆ, ಸ್ವಾಭಿಮಾನದ ವಿಚಾರ. ರಾಷ್ಟ್ರ ಧ್ವಜಕ್ಕೆ ಅವಮಾನ ಮಾಡಿದವರು ಮಂತ್ರಿಯಾಗಿ ಹೇಗೆ ಇರುತ್ತಾರೆ ಎಂದು ಪ್ರಶ್ನಿಸಿದರು.