ಕಲಬುರಗಿ, ಫೆ 19 (DaijiworldNews/KP): ರಾಜ್ಯದ ಕೆಲವೆಡೆ ಹಿಜಾಬ್ ವಿಚಾರದ ಕುರಿತು ಮಕ್ಕಳ ಮನಸ್ಸಿನಲ್ಲಿ ಮತಾಂಧ ವಿಷ ಬೀಜವನ್ನು ಬಿತ್ತಿ ಗಲಾಟೆ ಸೃಷ್ಟಿಸುತ್ತಿರುವ ಮತಾಂಧ ಶಕ್ತಿಗಳು ವಿರುದ್ದ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಎಚ್ಚರಿಕೆ ನೀಡಿದರು.
ನಗರದ ಪೊಲೀಸ್ ತರಬೇತಿ ಮಹಾವಿದ್ಯಾಲಯದಲ್ಲಿ ಪಿಎಸ್ಐ ಸೇರಿ ವಿವಿಧ ಪೊಲೀಸ್ ಅಧಿಕಾರಿಗಳ ನಿರ್ಗಮನ ಪಂಥಸಂಚಲನ ಪರಿವೀಕ್ಷಣೆ ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದ ಕೆಲವೆಡೆ ಹಿಜಾಬ್ ವಿಚಾರದ ಕುರಿತು ಮಕ್ಕಳ ಮನಸ್ಸಿನಲ್ಲಿ ಮತಾಂಧ ವಿಷ ಬೀಜವನ್ನು ಬಿತ್ತಿ ಗಲಾಟೆ ಸೃಷ್ಟಿಯಾಗುತ್ತಿದೆ, ಇದರ ಹಿಂದೆ ಮತಾಂಧ ಶಕ್ತಿಗಳು ಸೇರಿಕೊಂಡಿದ್ದು, ಅಂತಹ ಶಕ್ತಿಗಳಿಗೆ ಎಚ್ಚರಿಗೆ ಕೊಡುವ ಕೆಲಸ ಮಾಡಬೇಕಾಗಿದೆ ಎಂದು ಹೇಳಿದರು.
ಇನ್ನು ಸಮವಸ್ತ್ರ ಅಂದರೆ ಅದು ಸಮಾನತೆ, ಶಾಲೆಗಳು ಅಂದರೆ ಸಂಸ್ಕಾರ ತುಂಬುವ ಕೇಂದ್ರಗಳು. ಹೀಗಾಗಿ ನಮ್ಮ ಧರ್ಮ, ಜಾತಿ ಬೇರೆ -ಬೇರೆ ಎಂಬುದು ತೋರಿಸುವುದು ಸರಿಯಲ್ಲ ಎಂದರು.
ಹಿಜಾಬ್ ವಿವಾದ ಕುರಿತು ಸೂಕ್ತ ತನಿಖೆ ನಡೆಸುವ ನಿಟ್ಟಿನಲ್ಲಿ ಕೆಲ ಅಲ್ಪಸಂಖ್ಯಾತ ಶಾಸಕರು ನನ್ನನ್ನು ಭೇಟಿ ಮಾಡಿ ಮನವಿ ನೀಡಿದ್ದಾರೆ ಎಂದು ತಿಳಿಸಿದರು.
ಅಲ್ಲದೆ ವಿವಾದ ಹೆಚ್ಚಾದ ಕಾಲೇಜುಗಳ ಸುತ್ತ ನಿಷೇಧಾಜ್ಞೆ ಜಾರಿ ಮಾಡಲಾಗಿದೆ. ಅದನ್ನು ಮೀರಿ ಕಾಲೇಜಿನಲ್ಲಿ ಶಾಂತಿ ಭಂಗ ಮಾಡಿದರೆ ಅಂತಹವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ ಎಂದು ಎಚ್ಚರಿಗೆ ನೀಡಿದರು.
ಇನ್ನು ಈಶ್ವರಪ್ಪ ರಾಜೀನಾಮೆ ನೀಡಬೇಕು ಎನ್ನುತ್ತಿರುವ ಪ್ರತಿಪಕ್ಷಗಳ ಒತ್ತಾಯಕ್ಕೆ ಉತ್ತರಿಸಿದ ಅವರು, ಸಚಿವರು ಕೆಂಪುಕೋಟೆಯಲ್ಲಿ ಕೇಸರಿ ಧ್ವಜವನ್ನು ಹಾರಿಸಬಹುದು ಎಂದು ಎಲ್ಲಿ ಹೇಳಿದ್ದಾರೆ. ಮಾಧ್ಯಮದವರು ಕೇಳಿದ ಪ್ರಶ್ನೆಗೆ ಇನ್ನೊಂದು ನೂರು ವರ್ಷ ಕಳೆದ ಮೇಲೆ ಕೇಸರಿ ಧ್ವಜ ಹಾರಾಡಲೂಬಹುದು ಎಂದಿದ್ದಾರೆ ಅಷ್ಟೇ ರಾಷ್ಟ್ರಧ್ವಜ ತಾಯಿ ಇದ್ದ ಹಾಗೆ, ರಾಷ್ಟ್ರಧ್ವಜಕ್ಕೆ ಅಪಮಾನ ಮಾಡುವುದು ಸರಿಯಲ್ಲ ಎಂದು ಈಶ್ಷರಪ್ಪ ಯಾವಾಗಲು ಹೇಳುತ್ತಿದ್ದರು ಎಂದು ಹೇಳಿದರು.
ಅಲ್ಲದೆ ಮುಳುಗುತ್ತಿರುವವರಿಗೆ ಹುಲ್ಲು ಕಡ್ಡಿ ಆಸರೆ ಎಂಬಂತೆ ಮುಳುಗುತ್ತಿರುವ ಕಾಂಗ್ರೆಸ್ ಅನಗತ್ಯ ವಿಚಾರದಲ್ಲಿ ವಿವಾದವನ್ನು ಸೃಷ್ಟಿಸುತ್ತಿದ್ದಾರೆ ಎಂದರು.