ನವದೆಹಲಿ, ಫೆ 19 (DaijiworldNews/MS): ಭಾರತವು ಡ್ರೋನ್ ಸ್ಟಾರ್ಟ್ಅಪ್ಗಳಿಗಾಗಿ ಪೂರಕ ವ್ಯವಸ್ಥೆ ಹೊಂದಿದ್ದು , ಇದರ ಹೆಚ್ಚುತ್ತಿರುವ ಸಾಮರ್ಥ್ಯವು ಜಗತ್ತಿಗೆ ಹೊಸ ನಾಯಕತ್ವವನ್ನು ನೀಡಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ವಿಶ್ವಾಸ ವ್ಯಕ್ತಪಡಿಸಿದರು.
ಕೀಟನಾಶಕಗಳನ್ನು ಸಿಂಪಡಿಸಲು ಅಥವಾ ಮಾರುಕಟ್ಟೆಗಳಿಗೆ ಕೃಷಿ ಉತ್ಪನ್ನಗಳನ್ನು ಸಾಗಿಸುವ ಉದ್ದೇಶದ 100 ಡ್ರೋನ್ಗಳಿಗೆ ವಿವಿಧ ನಗರಗಳಲ್ಲಿ ಪ್ರಧಾನಿ ನರೇಂದ್ರ ಮೋದಿ ಶನಿವಾರ ಚಾಲನೆ ನೀಡಿದರು.
ಮಾನೇಸರ್ನಲ್ಲಿ ಆಯೋಜಿಸಲಾದ ವರ್ಚುವಲ್ ಸಮಾರಂಭದಲ್ಲಿ ಮಾತನಾಡಿದ ಅವರು " ರೈತರಿಗೆ ಇದೊಂದು ’ಅತ್ಯಂತ ನವೀನ ಮತ್ತು ಉತ್ತೇಜಕ ಉಪಕ್ರಮ’ ಎಂದು ವಿವರಿಸಿದ ಅವರು ಭಾರತದಲ್ಲಿ ಡ್ರೋನ್ ಸ್ಟಾರ್ಟ್ಅಪ್ಗಳ ಹೊಸ ಸಂಸ್ಕೃತಿ ಸಿದ್ಧವಾಗುತ್ತಿದೆ. ಈಗ ಇದು 200 ಕ್ಕಿಂತ ಹೆಚ್ಚಿನ ಸಂಖ್ಯೆಯಲ್ಲಿದೆ, ಇದು ಬೃಹತ್ ಪ್ರಮಾಣದಲ್ಲಿ ಉದ್ಯೋಗಾವಕಾಶಗಳ ಉತ್ಪಾದನೆಗೆ ಕಾರಣವಾಗುತ್ತದೆ" ಎಂದು ಹೇಳಿದರು.
"ಡ್ರೋನ್ಗಳ ಮೂಲಕ ರಸಗೊಬ್ಬರಗಳ ಸಿಂಪಡಣೆಯನ್ನು ಸಹ ಮಾಡಲಾಗುತ್ತಿದೆ. 'ಕಿಸಾನ್ ಡ್ರೋನ್ಗಳು' ಹೊಸ ಯುಗದ ಕ್ರಾಂತಿಯಾಗಲಿವೆ. ಶೀಘ್ರದಲ್ಲೇ, ಹೆಚ್ಚಿನ ಸಾಮರ್ಥ್ಯದ ಡ್ರೋನ್ಗಳು ತಾಜಾ ತರಕಾರಿಗಳು, ಹಣ್ಣುಗಳು ಮತ್ತು ಹೂವುಗಳನ್ನು ನೇರವಾಗಿ ಮಾರುಕಟ್ಟೆಗೆ ತಲುಪಿಸಲು ರೈತರಿಗೆ ನೆರವಾಗಲಿವೆ. ಮೀನುಗಾರರು ತಾಜಾ ಮೀನುಗಳನ್ನು ಮಾರುಕಟ್ಟೆಗೆ ತಲುಪಿಸಬಹುದು" ಎಂದು ಮೋದಿ ತಿಳಿಸಿದರು.
ಅದಲ್ಲದೇ ಡ್ರೋನ್ ಕ್ಷೇತ್ರದ ಅಭಿವೃದ್ಧಿಯಲ್ಲಿ ಯಾವುದೇ ಅಡೆತಡೆಯಾಗದಂತೆ ಹಾಗೂ ಅದರ ಏಳಿಗೆಗೆ ಅನುಕೂಲವಾಗುವಂತೆ ಈಗಾಗಲೇ ಹಲವಾರು ಸುಧಾರಣೆಗಳು ಮತ್ತು ನೀತಿ ಕ್ರಮಗಳನ್ನು ಕೈಗೊಂಡಿದೆ ಎಂದು ಅವರು ಹೇಳಿದರು.