ನವದೆಹಲಿ, ಫೆ 19 (DaijiworldNews/MS): ಸಿಎಎ ವಿರೋಧಿ ಪ್ರತಿಭಟನೆಗಳ ವೇಳೆ ಉತ್ತರ ಪ್ರದೇಶದಲ್ಲಿ ಸಾರ್ವಜನಿಕ ಆಸ್ತಿಪಾಸ್ತಿಗೆ ಹಾನಿ ಉಂಟು ಮಾಡಿದ ಆರೋಪ ಎದುರಿಸುತ್ತಿರುವವರಿಂದ ವಸೂಲಿ ಮಾಡಲಾದ ದಂಡದ ಹಣವನ್ನು ಮತ್ತೆ ಅವರಿಗೆ ಮರಳಿಸುವಂತೆ ಸುಪ್ರೀಂ ಕೋರ್ಟ್ ಶುಕ್ರವಾರ ಉತ್ತರ ಪ್ರದೇಶ ಸರ್ಕಾರಕ್ಕೆ ಸೂಚಿಸಿದೆ.
ಸಾರ್ವಜನಿಕ ಆಸ್ತಿಪಾಸ್ತಿಗೆ ನಷ್ಟ ಉಂಟು ಮಾಡಿರುವುದಕ್ಕೆ ಪರಿಹಾರವನ್ನು ಕಟ್ಟಿಕೊಡುವ ಸಲುವಾಗಿ ಸಿಎಎ ವಿರೋಧಿ ಪ್ರತಿಭಟನಾಕಾರರಿಗೆ ನೀಡಿದ್ದ ಶೋಕಾಸ್ ನೋಟಿಸ್ ಅನ್ನು ಹಿಂಪಡೆದಿರುವುದಾಗಿ ಉತ್ತರ ಪ್ರದೇಶ ಸರ್ಕಾರವು ನ್ಯಾ. ಡಿ ವೈ ಚಂದ್ರಚೂಡ್ ಮತ್ತು ನ್ಯಾ. ಸೂರ್ಯಕಾಂತ್ ಅವರಿದ್ದ ಪೀಠಕ್ಕೆ ಮಾಹಿತಿ ನೀಡಿತು. ಈ ವೇಳೆ ನ್ಯಾಯಾಲಯವು ಪ್ರತಿಭಟನಾಕಾರರಿಂದ ವಸೂಲಿ ಮಾಡಲಾಗಿರುವ ಆಸ್ತಿ ಹಾನಿ ಪರಿಹಾರವನ್ನೂ ಮರಳಿಸುವಂತೆ ಆದೇಶಿಸಿದೆ.
ಅದರೂ , 'ಉತ್ತರ ಪ್ರದೇಶ ಸಾರ್ವಜನಿಕ ಹಾಗೂ ಖಾಸಗಿ ಆಸ್ತಿ ಹಾನಿ ಪರಿಹಾರ ಕಾಯಿದೆ, 2021'ರ ಅಡಿ ರಾಜ್ಯ ಸರ್ಕಾರವು ಮತ್ತೊಮ್ಮೆ ಹೊಸತಾಗಿ ನೋಟಿಸ್ ನೀಡುವ ಮೂಲಕ ಪ್ರತಿಭಟನಾಕಾರರ ವಿರುದ್ಧ ಕ್ರಮಕ್ಕೆ ಮುಂದಾಗಬಹುದು ಎಂದು ಪೀಠ ಹೇಳಿದೆ.
"ಉತ್ತರ ಪ್ರದೇಶ ಸಾರ್ವಜನಿಕ ಹಾಗೂ ಖಾಸಗಿ ಆಸ್ತಿ ಹಾನಿ ಪರಿಹಾರ ಕಾಯಿದೆ - 2021" ಜಾರಿಗೆ ಬರುವುದಕ್ಕೂ ಮುನ್ನ ಆಸ್ತಿ ಹಾನಿ ನಷ್ಟ ಭರಿಸುವಂತೆ ನೋಟಿಸ್ ಜಾರಿಗೊಳಿಸಿದ್ದರಿಂದ ಅವುಗಳಿಗೆ ಶಾಸನದ ಬಲ ಇರಲಿಲ್ಲ. ಇದರಿಂದಾಗಿ ಎಲ್ಲ ನೋಟಿಸ್ಗಳನ್ನೂ ರದ್ದುಗೊಳಿಸುತ್ತಿರುವುದಾಗಿ ಪೀಠವು ಹೇಳಿದೆ. ಉತ್ತರ ಪ್ರದೇಶ ಸರ್ಕಾರವು ಹೊಸತಾಗಿ ಮೇಲೆ ಹೇಳಿದ ಕಾಯಿದೆಯಡಿ ನೋಟಿಸ್ ಜಾರಿಗೊಳಿಸಲು ಸ್ವತಂತ್ರ ಎಂದು ಸ್ಪಷ್ಟಪಡಿಸಿದೆ.