ತುಮಕೂರು, ಫೆ.18 (DaijiworldNews/SM): ಅಣ್ಣ-ತಂಗಿ ನಡುವಿನ ಅನೈತಿಕ ಸಂಬಂಧವೊಂದು ತಾಯಿಯ ಸಾವಿನಲ್ಲಿ ಅಂತ್ಯವಾಗಿರುವ ಘಟನೆ ತುಮಕೂರು ಜಿಲ್ಲೆಯ ಕೊರಟಗೆರೆ ಪಟ್ಟಣದ ಸಜ್ಜನರಾವ್ ಬೀದಿಯಲ್ಲಿ ನಡೆದಿದೆ.
ಈ ಹಿಂದೆ ಜನವರಿ ತಿಂಗಳಲ್ಲಿ ಸಂಪಿಗೆ ಬಿದ್ದು ಮಹಿಳೆಯೊಬ್ಬರು ಮೃತಪಟ್ಟ ಘಟನೆಗೆ ಇದೀಗ ಟ್ವಿಸ್ಟ್ ಸಿಕ್ಕಿದ್ದು, ಇದು ಆಕಸ್ಮಿಕ ಘಟನೆಯಲ್ಲ ಬದಲಾಗಿ ಕೊಲೆ ಎಂಬುವುದನ್ನು ಪೊಲೀಸರು ಪತ್ತೆಹಚ್ಚಿದ್ದಾರೆ. ಅದೂ ಕೂಡ ತನ್ನ ಮಗಳೇ ಈ ಕೊಲೆ ನಡೆಸಿದ್ದಾಳೆ ಎಂಬುವುದು ಪೊಲೀಸ್ ತನಿಖೆಯಿಂದ ಬಯಲಾಗಿದೆ.
ತುಮಕೂರು ಜಿಲ್ಲೆಯ ಕೊರಟಗೆರೆ ಪಟ್ಟಣದ ಸಜ್ಜನರಾವ್ ನಿವಾಸಿ 45 ವರ್ಷದ ಸಾವಿತ್ರಮ್ಮ ಮೃತಪಟ್ಟ ಮಹಿಳೆಯಾಗಿದ್ದಾರೆ. ಇವರ ಮಗಳು ಹಾಗೂ ಅವರ ಸಹೋದರಿಯ ಮಗನ ನಡುವೆ ಪ್ರೇಮಾಂಕುರ ಉಂಟಾಗಿದೆ. ವಾಡಿಕೆಯಲ್ಲಿ ಇವರಿಬ್ಬರು ಅಣ್ಣ ತಂಗಿಯಾಗಿದ್ದರೂ ಕೂಡ ಪ್ರೇಮದ ಬಲೆಗೆ ಬಿದ್ದಿದ್ದರು. ಈ ವಿಚಾರಕ್ಕೆ ಸಂಬಂಧಿಸಿದಂತೆ ತನ್ನ ಮಗಳಿಗೆ ಸಾವಿತ್ರಮ್ಮ ಬುದ್ದಿವಾದ ಹೇಳಿದ್ದರು. ಇಬ್ಬರ ನಡುವಿನ ಪ್ರೀತಿಗೆ ತಾಯಿ ಅಡ್ಡವಾಗುತ್ತಿದ್ದಾಳೆ ಎಂದು ತನಗೆ ಜನ್ಮವಿತ್ತ ಅಮ್ಮನನ್ನೇ ಪಾಪಿ ಕೊಂದು ಬಿಟ್ಟಿದ್ದಾಳೆ ಎಂಬುವುದು ಪೊಲೀಸ್ ತನಿಖೆಯಿಂದ ಬಹಿರಂಗಗೊಂಡಿದೆ.
ಪ್ರಕರಣಕ್ಕೆ ಸಂಬಂಧಿಸಿದಂತೆ 21 ವರ್ಷದ ಶೈಲಜಾ ಮತ್ತು 26 ವರ್ಷದ ಪುನೀತ್ ಅವರನ್ನು ಪೊಲೀಸರು ಬಂಧಿಸಿ ಕಂಬಿ ಹಿಂದೆ ಕಳುಹಿಸಿದ್ದಾರೆ. ತಾಯಿ ಸಾವಿತ್ರಮ್ಮನ ಸಾವಿನ ಬಳಿಕ ಇಬ್ಬರ ನಡುವೆ ಗಾಡವಾದ ಪ್ರೀತಿ ಉಂಟಾಗಿದ್ದು, ಇದರಿಂದಾಗಿ ಪೊಲೀಸರಿಗೆ ಆರಂಭದಲ್ಲಿ ಉಂಟಾಗಿದ್ದ ಸಂಶಯ ಮತ್ತಷ್ಟು ಬಲಗೊಂಡಿದೆ. ಈ ಕಾರಣದಿಂದಾಗಿ ಸಂಪಿಗೆ ಬಿದ್ದು ಮಹಿಳೆ ಮೃತಪಟ್ಟ ಪ್ರಕರಣದ ತನಿಖೆಯನ್ನು ಮತ್ತಷ್ಟು ಆಳವಾಗಿಸಿದ ಪೊಲೀಸರು ಇಬ್ಬರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ ಸಂದರ್ಭದಲ್ಲಿ ಪ್ರಕರಣದ ಸತ್ಯಾಸತ್ಯತೆ ಬಯಲಾಗಿದೆ.