ಬೆಂಗಳೂರು, ಫೆ 18 (DaijiworldNews/HR): ಹಿಜಾಬ್ ವಿವಾದಕ್ಕೆ ಸಂಬಂಧಿಸಿದಂತೆ ಸತತ ಆರನೇ ದಿನ ವಿಚಾರಣೆ ಇಂದು ಹೈಕೋರ್ಟ್ನಲ್ಲಿ ನಡೆದಿದ್ದು, ವಿಚಾರಣೆಯ ಹೈಲೈಟ್ಸ್ ಇಲ್ಲಿದೆ.
ಹಿಜಾಬ್ ಇಸ್ಲಾಂ ಧರ್ಮದ ಅತ್ಯಗತ್ಯ ಧಾರ್ಮಿಕ ಆಚರಣೆಯಲ್ಲ ಮತ್ತು ಅದರ ಬಳಕೆಯನ್ನು ತಡೆಯುವುದು ಧಾರ್ಮಿಕ ಸ್ವಾತಂತ್ರ್ಯವನ್ನು ಖಾತರಿಪಡಿಸುವ ಭಾರತೀಯ ಸಂವಿಧಾನದ 25 ನೇ ವಿಧಿಯನ್ನು ಉಲ್ಲಂಘಿಸುವುದಿಲ್ಲ ಎಂದು ಕರ್ನಾಟಕ ಸರ್ಕಾರದ ಪರ ವಕೀಲ ಎಜಿ ನಾವದಗಿ ಹೈಕೋರ್ಟ್ನಲ್ಲಿ ವಾದಿಸಿದೆ.
ಸರಕಾರದ ಪರ ಮತ್ತು ಅರ್ಜಿದಾರರ ಪರ ನಿರಂತರವಾದ ವಾದ ಆಲಿಸಿದ ನ್ಯಾಯ ಪೀಠ ವಿಚಾರಣೆಯನ್ನು ಸೋಮವಾರ ಫೆ. 21 ಕ್ಕೆ ಮುಂದೂಡಿದೆ.
ಕರ್ನಾಟಕದ ಅಡ್ವೊಕೇಟ್ ಜನರಲ್ ಪ್ರಭುಲಿಂಗ ನಾವಡಗಿ ಅವರು ಹಿಜಾಬ್ ಧರಿಸುವುದು ಇಸ್ಲಾಂ ಧರ್ಮದ ಅತ್ಯಗತ್ಯ ಧಾರ್ಮಿಕ ಭಾಗವಲ್ಲ ಎಂಬ ನಿಲುವನ್ನು ನಾವು ತೆಗೆದುಕೊಂಡಿದ್ದೇವೆ ಎಂದು ನ್ಯಾಯಮೂರ್ತಿ ರಿತು ರಾಜ್ ಅವಸ್ತಿ, ನ್ಯಾಯಮೂರ್ತಿ ಜೆ ಎಂ ಖಾಜಿ ಮತ್ತು ನ್ಯಾಯಮೂರ್ತಿ ಕೃಷ್ಣ ಎಂ ದೀಕ್ಷಿತ್ ಅವರನ್ನೊಳಗೊಂಡ ಹೈಕೋರ್ಟ್ನ ಪೂರ್ಣ ಪೀಠಕ್ಕೆ ತಿಳಿಸಿದ್ದಾರೆ.
ಇನ್ನು ಫೆಬ್ರುವರಿ 5 ರಂದು ಕರ್ನಾಟಕ ಸರ್ಕಾರವು ಹಿಜಾಬ್ ಅಥವಾ ಕೇಸರಿ ಶಾಲು ಧರಿಸುವುದನ್ನು ನಿಷೇಧಿಸಿದ ಕರ್ನಾಟಕ ಸರ್ಕಾರದ ಆದೇಶವನ್ನು ಪ್ರಶ್ನಿಸಿದ ಕೆಲವು ಮುಸ್ಲಿಂ ಹುಡುಗಿಯರ ಆರೋಪವನ್ನು ಎಜಿ ತಿರಸ್ಕರಿಸಿದರು, ಇದು ಸಂವಿಧಾನದ 25 ನೇ ವಿಧಿಯನ್ನು ಉಲ್ಲಂಘಿಸುತ್ತದೆ ಎಂದು ಹೇಳಿದ್ದಾರೆ.
ಸರ್ಕಾರದ ಆದೇಶವು ಸಂವಿಧಾನದ 19 (1) (ಎ) ಕಲಂ ಅನ್ನು ಉಲ್ಲಂಘಿಸುವುದಿಲ್ಲ ಎಂದು ನಾವಡಗಿ ವಾದಿಸಿದ್ದು, ಆರ್ಟಿಕಲ್ 19(1)(ಎ) ತನ್ನ ಎಲ್ಲಾ ನಾಗರಿಕರಿಗೆ ಅಭಿವ್ಯಕ್ತಿ ಸ್ವಾತಂತ್ರ್ಯದ ಹಕ್ಕನ್ನು ಖಾತರಿಪಡಿಸುತ್ತದೆ. ರಾಜ್ಯ ಸರ್ಕಾರದ ಫೆಬ್ರವರಿ 5 ರ ಆದೇಶವು ಕಾನೂನು ಬದ್ಧವಾಗಿದೆ ಮತ್ತು ಅದರಲ್ಲಿ ಆಕ್ಷೇಪಿಸಲು ಏನೂ ಇಲ್ಲ ಎಂದು ಪ್ರತಿಪಾದಿಸಿದ್ದಾರೆ.
ಒಂದು ಬಾರಿ ಒಂದೊಂದು ಪಕ್ಷದವರು ಶಾಸಕರಾಗಿ ಆಯ್ಕೆಯಾಗುತ್ತಾರೆ. ಶಾಸಕರಾದವರನ್ನು ಸಮಿತಿ ಅಧ್ಯಕ್ಷರಾಗಿ ಮಾಡಬಹುದೇ? ಅವರ ರಾಜಕೀಯ ಚಿಂತನೆಗಳು ಶಿಕ್ಷಣ ಸಂಸ್ಥೆಗಳ ಮೇಲೆ ಪರಿಣಾಮ ಬೀರುವುದಿಲ್ಲವೇ ? ರಾಜ್ಯ ಸರ್ಕಾರಕ್ಕೆ ನ್ಯಾ.ಕೃಷ್ಣ ದೀಕ್ಷಿತ್ ಪ್ರಶ್ನೆ ಕೇಳಿದ್ದಾರೆ. ಈ ಪಕ್ಷ ಆ ಪಕ್ಷ ಎಂದು ಹೇಳುತ್ತಿಲ್ಲ. ಶಾಸಕ ಅಧ್ಯಕ್ಷರಾದರೆ ಉಳಿದ ಸದಸ್ಯರ ಕಥೆಯೇನು. ಕಾಫಿ ಟೀ ಕುಡಿಯುವುದಲ್ಲದೇ ಅಡಳಿತದಲ್ಲೂ ಭಾಗವಹಿಸಲು ಸಾಧ್ಯವೇ. ರಾಜ್ಯ ಸರ್ಕಾರಕ್ಕೆ ನ್ಯಾ. ಕೃಷ್ಣ ದೀಕ್ಷಿತ್ ಪ್ರಶ್ನಿಸಿದ್ದಾರೆ. ಇದು ಖಂಡಿತಾ ಚಿಂತಿಸಬೇಕಾದ, ಚರ್ಚಿಸಬೇಕಾದ ವಿಚಾರವಾಗಿದೆ ಎಂದು ಎಜಿ ನಾವದಗಿ ಹೇಳಿದ್ದಾರೆ.
ನಾವು ಹಿಜಾಬ್ ವಿಚಾರವನ್ನೂ ಸಮಿತಿಗೆ ನೀಡಿದ್ದೇವೆ ಎಂದು ಎಜಿ ವಾದ ಮಾಡಿದ್ದಾರೆ. ಒಂದು ವೇಳೆ ಕಾಲೇಜು ಅಭಿವೃದ್ದಿ ಸಮಿತಿ ಅನುಮತಿ ನೀಡಬಹುದು. ಹಿಜಾಬ್ ಗೆ ಅನುಮತಿ ನೀಡಿದರೆ ನಿಮಗೆ ಆಕ್ಷೇಪವಿಲ್ಲವೇ ಎಂದು ಸಿಜೆ ಪ್ರಶ್ನಿಸಿದ್ದು, ಅಂತಹ ದೂರುಗಳು ಬಂದರೆ ಸರ್ಕಾರ ಪರಿಗಣಿಸಲಿದೆ ಎಂದು ಎಜಿ ನಾವದಗಿ ಹೇಳಿದ್ದಾರೆ. ಸಾವಿರಾರು ಅರ್ಜಿಗಳು ದಾಖಲಾಗಬೇಕೆಂದು ಬಯಸುತ್ತೀರಾ ಎಂದು ಸರ್ಕಾರಕ್ಕೆ ನ್ಯಾ.ಕೃಷ್ಣ ದೀಕ್ಷಿತ್ ಪ್ರಶ್ನೆ ಮಾಡಿದ್ದಾರೆ. ಹಿಜಾಬ್ ಬಗ್ಗೆ ನಿಮ್ಮ ನಿಲುವನ್ನು ಸ್ಪಷ್ಟಪಡಿಸಿಲ್ಲ ಎಂದು ಹೈಕೋರ್ಟ್ ಹೇಳಿದೆ.
ಇನ್ನು 2018ರಲ್ಲಿ ಹೆಣ್ಣುಮಕ್ಕಳಿಗೆ ಸಮವಸ್ತ್ರ ಸಂಹಿತೆ ರೂಪಿಸಲಾಗಿದ್ದು, ಡಿಸೆಂಬರ್ 2021ರವರೆಗೆ ಕಾಲೇಜಿನಲ್ಲಿ ಸಮಸ್ಯೆ ಇರಲಿಲ್ಲ. ಉಡುಪಿಯ ಪಿಯು ಕಾಲೇಜು ವಿದ್ಯಾರ್ಥಿನಿಯರ ಕಾಲೇಜಾಗಿದ್ದು, ಕೆಲ ವಿದ್ಯಾರ್ಥಿನಿಯರು ಹಿಜಾಬ್ ಧರಿಸಿ ಬರುವುದಾಗಿ ಹೇಳಿದರು. ಡಿಸೆಂಬರ್ 2021 ರಲ್ಲಿ ಈ ಬಗ್ಗೆ ಪ್ರಾಶುಂಪಾಲರಿಗೆ ಮನವಿ ನೀಡಿದರು. ಜನವರಿ 1, 2022 ರಂದು ಕಾಲೇಜು ಅಭಿವೃದ್ದಿ ಸಮಿತಿ ಸಭೆ ಸೇರಿತು. 1985 ರಿಂದ ಎಲ್ಲಾ ವಿದ್ಯಾರ್ಥಿನಿಯರೂ ಸಮವಸ್ತ್ರ ಧರಿಸುತ್ತಿದ್ದರು. ಸಹೋದರತ್ವ ಭಾವನೆಯಿಂದ ಇರಬೇಕೆಂದು ಸಮವಸ್ತ್ರ ನಿಗದಿಯಾಗಿದೆ ಎಂದು ಹೇಳಲಾಗಿದೆ.