ಬೆಂಗಳೂರು, ಫೆ 18 (DaijiworldNews/MS): ರಾಷ್ಟ್ರ ಧ್ವಜದಬಗ್ಗೆ ವಿವಾದಾತ್ಮಕ ಹೇಳಿಕೆಯನ್ನು ನೀಡಿದ ಸಚಿವ ಕೆ.ಎಸ್ ಈಶ್ವರಪ್ಪ ವಿರುದ್ದ ಕಾಂಗ್ರೆಸ್ ವಿಧಾನಸೌಧದಲ್ಲಿ ನಡೆಸಿದ ಅಹೋರಾತ್ರಿ ಧರಣಿಯೂ, ನಮ್ಮ ಹಾಗೂ ಬಿಜೆಪಿ ನಡುವಿನ ವೈಯಕ್ತಿಕ ಹೋರಾಟವಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಹೇಳಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಅವರು, " ವಿಧಾನಸೌಧದಲ್ಲಿ ಅಹೋರಾತ್ರಿ ನಡೆಸಿದ ಧರಣಿ ನಮ್ಮ ಹಾಗೂ ಬಿಜೆಪಿ ನಡುವಿನ ವೈಯಕ್ತಿಕ ಹೋರಾಟವಲ್ಲ. ದೇಶದ ಸ್ವಾತಂತ್ರ್ಯಕ್ಕಾಗಿ ನಮ್ಮ, ನಿಮ್ಮ ಪೂರ್ವಜರ ತ್ಯಾಗ, ಬಲಿದಾನ ಅಪಾರವಾಗಿದೆ. ಇದು ದೇಶದ ಗೌರವ ಹಾಗೂ 135 ಕೋಟಿ ಭಾರತೀಯರ ಸ್ವಾಭಿಮಾನದ ಪ್ರಶ್ನೆ" ಎಂದು ಹೇಳಿದ್ದಾರೆ.
"ರಾಷ್ಟ್ರಧ್ವಜ ಹಾರುವಾಗ ನಮ್ಮ ಮೈ ರೋಮಾಂಚನವಾಗುತ್ತದೆ. ಅಂತಹ ಧ್ವಜ ತೆಗೆದು ಕೇಸರಿ ಧ್ವಜ ಹಾರಿಸುತ್ತೇವೆ ಎಂದರೆ ಈ ದೇಶಕ್ಕೆ ಸ್ವಾತಂತ್ರ್ಯ, ರಾಷ್ಟ್ರಧ್ವಜ ತಂದುಕೊಟ್ಟ ಕಾಂಗ್ರೆಸ್ ಪಕ್ಷದ ಕಟ್ಟಾಳುಗಳಿಗೆ ರಕ್ತ ಕುದಿಯುವುದಿಲ್ಲವೇ? ಅದನ್ನು ಮುಖ್ಯಮಂತ್ರಿಗಳು ಸಮರ್ಥಿಸಿಕೊಂಡರೆ ಖಂಡಿತ ಇದು ಅವರ ಸ್ಥಾನಕ್ಕೆ ಅಗೌರವ" ಎಂದು ಖಂಡಿಸಿದ್ದಾರೆ.
"ಈಶ್ವರಪ್ಪ ಅವರ ರಾಜೀನಾಮೆ ಪಡೆಯಿರಿ ಎಂದು ನಾವು ಹೇಳುತ್ತಿಲ್ಲ. ಅವರನ್ನು ಸಂಪುಟ ಸ್ಥಾನದಿಂದ ವಜಾಗೊಳಿಸಿ ಎಂಬುದು ನಮ್ಮ ಆಗ್ರಹ. ಮುಖ್ಯಮಂತ್ರಿಗಳು ಸಂವಿಧಾನ, ದೇಶದ ಗೌರವ ಕಾಪಾಡುವುದಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಈಗ ಆ ಕೆಲಸ ಮಾಡಬೇಕಲ್ಲವೇ? ಇದು ಕೇವಲ ಈಶ್ವರಪ್ಪ ಅವರ ವಿಚಾರವಲ್ಲ, ರಾಷ್ಟ್ರಧ್ವಜದ ಗೌರವದ ಪ್ರಶ್ನೆ" ಎಂದು ಒತ್ತಾಯಿಸಿದ್ದಾರೆ.