ತುಮಕೂರು, ಫೆ 18 (DaijiworldNews/HR): ಹಿಜಾಬ್ ಪ್ರಕರಣದ ವಿಚಾರಣೆಯನ್ನು ಸುಪ್ರಿಂ ಕೋರ್ಟ್ ಪ್ರತಿದಿನವೂ ನಡೆಸುತ್ತಿದ್ದರೂ, ವಿದ್ಯಾರ್ಥಿಗಳು ಹಿಜಾಬ್ ಧರಿಸಿ ಕಾಲೇಜುಗಳಿಗೆ ಬಂದು ಕಾಲೇಜು ಪ್ರಾಶುಂಪಾಲರೊಂದಿಗೆ ವಾಗ್ವಾದಕ್ಕಿಳಿಯುವುದು ಮುಂದುವರಿದಿದ್ದು, ಈ ವಿದ್ಯಾರ್ಥಿಗಳ ವಿರುದ್ಧ ಎಫ್ಐಆರ್ ದಾಖಲಿಸಲಾಗಿದೆ.
ಹಿಜಾಬ್ ಧರಿಸಿ ತರಗತಿಗಳಿಗೆ ಹಾಜರಾಗುವ ಹಕ್ಕು ನೀಡುವಂತೆ ಆಗ್ರಹಿಸಿ ವಿದ್ಯಾರ್ಥಿಗಳು ಕಾಲೇಜು ಆವರಣದಲ್ಲಿ ಪ್ರತಿಭಟನೆ ನಡೆಸುತ್ತಿದ್ದು, ಕಳೆದ ಎರಡು ದಿನಗಳಲ್ಲಿ ನಿಷೇಧಾಜ್ಞೆ ಉಲ್ಲಂಘಿಸಿದ 15 ರಿಂದ 20 ವಿದ್ಯಾರ್ಥಿಗಳ ವಿರುದ್ಧ ತುಮಕೂರಿನ ಎಂಪ್ರೆಸ್ ಕಾಲೇಜಿನ ಪ್ರಾಂಶುಪಾಲರು ತುಮಕೂರು ನಗರ ಪೊಲೀಸರಿಗೆ ದೂರು ನೀಡಿದ್ದು, ಪ್ರಾಂಶುಪಾಲರು ದೂರಿನಲ್ಲಿ ಯಾವುದೇ ವಿದ್ಯಾರ್ಥಿಯ ಹೆಸರು ಹೇಳಿಲ್ಲ.
ಹಿಜಾಬ್ ಧರಿಸಿ ತರಗತಿಗಳಿಗೆ ಹಾಜರಾಗಲು ಅನುಮತಿ ಕೋರಿ ಅಧಿಕಾರಿಗಳ ವಿರುದ್ಧ ಪ್ರತಿಭಟನೆ ನಡೆಸಿದ ವಿದ್ಯಾರ್ಥಿಗಳ ವಿರುದ್ಧ ಇದು ಮೊದಲ ಎಫ್ಐಆರ್ ಆಗಿದೆ. ಇನ್ನು ಮುಂದೆ ವಿದ್ಯಾರ್ಥಿಗಳ ಬಗ್ಗೆ ಮೃದು ಧೋರಣೆ ತೋರುವುದಿಲ್ಲ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಅವರು ಈ ಹಿಂದೆಯೇ ಹೇಳಿಕೆ ನೀಡಿದ್ದು, ಮಧ್ಯಂತರ ಆದೇಶವನ್ನು ಉಲ್ಲಂಘಿಸುವವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಸೂಚಿಸಿದ್ದಾರೆ.
ಇನ್ನು ಧಾರ್ಮಿಕ ಗುರುತು ಇರುವ ಬಟ್ಟೆಗಳನ್ನು ಧರಿಸಿ ಬರುವಂತಿಲ್ಲ ಎಂದು ಕೋರ್ಟ್ ಆದೇಶದಂತೆ ಸರ್ಕಾರ ನಮಗೆ ಸೂಚನೆ ನೀಡಿರುವುದರಿಂದ ನೀವು ಹಿಜಾಬ್ ಧರಿಸಿ ತರಗತಿಯೊಳಗೆ ಹೋಗಿ ಪಾಠ ಮಾಡುವಂತಿಲ್ಲ ಎಂದು ಪ್ರಾಂಶುಪಾಲರು ಹೇಳಿದ ಹಿನ್ನೆಲೆಯಲ್ಲಿ ಅತಿಥಿ ಉಪನ್ಯಾಸಕಿ ಚಾಂದಿನಿ ನಾಜ್ ಎಂಬವರು ರಾಜೀನಾಮೆ ನೀಡಿದ್ದಾರೆ.
ತುಮಕೂರಿನ ಜೈನ್ ಪಿಯು ಕಾಲೇಜಿನಲ್ಲಿ ಚಾಂದಿನಿಯವರು ಕಳೆದ ಮೂರು ವರ್ಷಗಳಿಂದ ಅತಿಥಿ ಉಪನ್ಯಾಸಕಿಯಾಗಿ ಸೇವೆ ಸಲ್ಲಿಸುತ್ತಿದ್ದು, ಹಿಜಾಬ್ ತೆಗೆಯಿರಿ ಎಂದು ಹೇಳುವ ಮೂಲಕ ನನ್ನ ಆತ್ಮಗೌರವಕ್ಕೆ ಧಕ್ಕೆಯುಂಟಾಗಿದೆ ಎಂದು ಹೇಳಿ ರಾಜೀನಾಮೆ ನೀಡಿದ್ದಾರೆ.