ಮಹಾರಾಷ್ಟ್ರ, ಫೆ 18 (DaijiworldNews/HR): ಹಕ್ಕಿ ಜ್ವರದ ಭಯದ ಹಿನ್ನೆಲೆಯಲ್ಲಿ ಮುಂದಿನ ಕೆಲವು ದಿನಗಳಲ್ಲಿ ಮಹಾರಾಷ್ಟ್ರದ ಥಾಣೆಯ ಸುಮಾರು 25,000 ಕೋಳಿಗಳನ್ನು ಸಾಯಿಸಲಾಗುವುದು ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಥಾಣೆ ಜಿಲ್ಲೆಯ ಶಹಾಪುರ ತಾಲ್ಲೂಕಿನ ವೆಹ್ಲೋಲಿ ಗ್ರಾಮದ ಜಮೀನಿನಲ್ಲಿ ಸುಮಾರು 100 ಕೋಳಿಗಳು ಇದ್ದಕ್ಕಿದ್ದಂತೆ ಸಾವನ್ನಪ್ಪಿದ ಬಳಿಕ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಇನ್ನು ಸೋಂಕನ್ನು ನಿಯಂತ್ರಿಸಲು ಕ್ರಮಗಳನ್ನು ತೆಗೆದುಕೊಳ್ಳಲು ಜಿಲ್ಲಾ ಪಶುಸಂಗೋಪನಾ ಇಲಾಖೆಗೆ ಆದೇಶಿಸಲಾಗಿದ್ದು, ಸತ್ತ ಪಕ್ಷಿಗಳ ಮಾದರಿಗಳನ್ನು ಪರೀಕ್ಷೆಗಾಗಿ ಪುಣೆ ಮೂಲದ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ ಎಂದು ತಿಳಿಸಿದ್ದಾರೆ.
ಥಾಣೆ ಜಿಲ್ಲಾ ಪರಿಷತ್ ನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ. ಭೌಸಾಹೇಬ್ ದಂಗ್ಡೆ, ಪರೀಕ್ಷೆಗಳ ಫಲಿತಾಂಶಗಳು ಎಚ್5ಎನ್1 ಹಕ್ಕಿಜ್ವರದಿಂದಾಗಿ ಕೋಳಿಗಳು ಸತ್ತಿರುವುದನ್ನು ದೃಢಪಡಿಸಿದೆ ಎಂದು ಹೇಳಿದ್ದಾರೆ.