ಬೆಂಗಳೂರು, ಫೆ.17 (DaijiworldNews/SM): ಕಾಂಗ್ರೆಸ್ ನಾಯಕರು ಪ್ರತಿಭಟನೆಯ ಮೂಲಕ ಸದನವನ್ನು ದುರುಪಯೋಗಪಡಿಸಿದ್ದಾರೆ ಎಂದು ಗೃಹ ಸಚಿವ ಅರಗ ಜ್ಞಾನೇಂದ್ರ ಹೇಳಿದ್ದಾರೆ.
ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಹುಬ್ಬಳ್ಳಿಯ ಈದ್ಗಾ ಮೈದಾನದಲ್ಲಿ ರಾಷ್ಟ್ರಧ್ವಜ ಹಾರಿಸಲು ಪ್ರಯತ್ನಿಸಿದ ಸಂದರ್ಭದಲ್ಲಿ ನಾಗರಿಕರ ಮೇಲೆ ಗುಂಡು ಹಾರಿಸಲಾಗಿತ್ತು. ಇದು ಕಾಂಗ್ರೆಸ್ ನಾಯಕರ ಇತಿಹಾಸ.
ಅದೇ ರಾಷ್ಟ್ರ ಧ್ವಜವನ್ನು, ಧ್ವಜ ಸಂಹಿತೆಗೆ ವಿರುದ್ಧವಾಗಿ ಸದನದಲ್ಲಿ ಪ್ರದರ್ಶಿಸಿದ್ದಾರೆ. ರಾಷ್ಟ್ರ ಧ್ವಜವನ್ನು ತಮ್ಮ ರಾಜಕೀಯ ಬೇಳೆ ಬೇಯಿಸಿಕೊಳ್ಳಲು ಬಳಸಿಕೊಂಡಿರುವುದು ಕಾಂಗ್ರೆಸ್ ಪಕ್ಷದ ದೌರ್ಬಲ್ಯವಾಗಿದೆ ಎಂದು ಅವರು ಅಸಮಾಧಾನ ಹೊರಹಾಕಿದ್ದಾರೆ.
ಸಚಿವ ಕೆ ಎಸ್ ಈಶ್ವರಪ್ಪ ರವರಂಥ ಅಪ್ಪಟ ರಾಷ್ಟ್ರ ಪ್ರೇಮಿ ಹಾಗೂ ನಾಯಕರನ್ನು ಗುರಿಯಾಗಿಟ್ಟುಕೊಂಡು, ಕೆಸರೆರುಚುವ ವ್ಯರ್ಥ ಪ್ರಯತ್ನವನ್ನು ಇನ್ನಾದರೂ ಕಾಂಗ್ರೆಸ್ ಕೈಬಿಡಬೇಕು. ಹಾಗೂ ಸುಗಮ ಕಲಾಪ ನಡೆಸಲು ಅವಕಾಶ ಕಲ್ಪಿಸಬೇಕೆಂದು ಅವರು ಆಗ್ರಹಿಸಿದ್ದಾರೆ.