ತಿರುವನಂತಪುರ, ಫೆ 17 (DaijiworldNews/KP): ದೇಶದ ಅತ್ಯಂತ ಕಿರಿಯ ಮೇಯರ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿರುವ ಆರ್ಯ ರಾಜೇಂದ್ರನ್ ಅವರನ್ನು ಕೇರಳದ ಅತ್ಯಂತ ಕಿರಿಯ ವಯಸ್ಸಿನ ಶಾಸಕ ಕೆ.ಎಂ.ಸಚಿನ್ದೇವ್ ಅವರನ್ನು ವರಿಸಲಿದ್ದಾರೆ.
ಇಬ್ಬರೂ ಸಿಪಿಎಂ ಪಕ್ಷದವರೇ ಆಗಿದ್ದು, ಎರಡೂ ಕುಟುಂಬದವರು ವಿವಾಹದ ಪ್ರಸ್ತಾವಕ್ಕೆ ಸಮ್ಮತಿ ಸೂಚಿಸಿದ್ದು, ಸದ್ಯದಲ್ಲೇ ಮದುವೆ ದಿನಾಂಕವನ್ನು ಪ್ರಕಟಿಸಲಿದ್ದಾರೆ
ದೇಶದಲ್ಲಿ ಅತಿ ಚಿಕ್ಕ ವಯಸ್ಸಿನಲ್ಲೇ ಮೇಯರ್ ಹುದ್ದೆ ಅಲಂಕರಿಸಿದ ತಿರುವನಂತರಪುರ ಮಹಾನಗರ ಪಾಲಿಕೆಯ ಮೇಯರ್ ಆರ್ಯ ರಾಜೇಂದ್ರನ್ ಅವರು, ಕೇರಳದ ಅತ್ಯಂತ ಕಿರಿಯ ವಯಸ್ಸಿನ ಶಾಸಕ ಕೆ.ಎಂ.ಸಚಿನ್ದೇವ್ ಅವರನ್ನು ವರಿಸಲಿದ್ದಾರೆ.
ಆರ್ಯ ಅವರು ತಿರುವನಂತರಪುರ ಮೂಲದವರಾಗಿದ್ದರೆ, ಸಚಿನ್ದೇವ್ ಅವರು ಕೋಯಿಕ್ಕೋಡ್ನವರು. ಇಬ್ಬರೂ ಸ್ಟೂಡೆಂಟ್ ಫೆಡರೇಷನ್ ಆಫ್ ಇಂಡಿಯಾ (ಎಫ್ಎಫ್ಐ) ಸಂಘಟನೆಯಲ್ಲಿ ಜೊತೆಯಾಗಿ ಕಾರ್ಯ ನಿರ್ವಹಿಸಿದ್ದಾರೆ.
ಆರ್ಯ ಅವರು ಮೇಯರ್ ಆದಾಗ ಅವರ ವಯಸ್ಸು 21. ಆಗಿನ್ನು ಅವರು ಪದವಿ ವ್ಯಾಸಂಗ ಮಾಡುತ್ತಿದ್ದರು. ಸಚಿನ್ದೇವ್ (28) ಅವರು ಎಲ್ಎಲ್ಬಿ ಪದವೀಧರರಾಗಿದ್ದು, ಎಸ್ಎಫ್ಐನ ಜಂಟಿ ಕಾರ್ಯದರ್ಶಿಯಾಗಿದ್ದಾರೆ.
ಇನ್ನು ನಾವಿಬ್ಬರೂಉತ್ತಮ ಸ್ನೇಹಿತರು, ಸ್ಟೂಡೆಂಟ್ ಫೆಡರೇಷನ್ ಆಫ್ ಇಂಡಿಯಾದಲ್ಲಿ ಒಟ್ಟಿಗೆ ಕೆಲಸ ಮಾಡಿದ್ದೇವೆ, ಅಲ್ಲದೆ ಒಂದೇ ರಾಜಕೀಯ ಸಿದ್ಧಾಂತವನ್ನು ನಂಬಿರುವವರು ಎಂದು ಆರ್ಯ ರಾಜೇಂದ್ರನ್ ಹೇಳಿದ್ದಾರೆ.
ನಾವು ಮೊದಲು ಮದುವೆಯ ಬಗ್ಗೆ ಪರಸ್ಪರ ಚರ್ಚಿಸಿ ಪೋಷಕರಿಗೆ ಮಾಹಿತಿ ನೀಡಿದೆವು. ವಿವಾಹದ ದಿನಾಂಕವನ್ನು ಪಕ್ಷ ಮತ್ತು ಕುಟುಂಬದವರು ನಿರ್ಧರಿಸುತ್ತಾರೆ ಎಂದು ಹೇಳಿದ್ದಾರೆ.