ಅಲಪ್ಪುಳ, ಫೆ 17 (DaijiworldNews/KP): ಹಳೆ ದ್ವೇಷದ ಹಿನ್ನಲೆ ಕೇರಳದ ಅಲಪ್ಪುಳ ಜಿಲ್ಲೆಯ ಹರಿಪಾಡ್ನಲ್ಲಿ ಭಾರತೀಯ ಜನತಾ ಪಾರ್ಟಿ ಪಕ್ಷದ ಕಾರ್ಯಕರ್ತನೊಬ್ಬನ ಮೇಲೆ ಚಾಕುವಿನಿಂದ ಇರಿದು ಹತ್ಯೆ ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ .
ಮೃತರನ್ನು ಹರಿಪಾದ್ನ ಕುಮಾರಪುರಂ ಬಳಿಯ ವರ್ಯಂಕೋಡ್ವಿದ ಶರತ್ ಚಂದ್ರನ್(26) ಎಂದು ಗುರುತಿಸಲಾಗಿದೆ.
ಬುಧವಾರ ರಾತ್ರಿ 11.30ರ ಸುಮಾರಿಗೆ ಶರತ್ ಚಂದ್ರನ್ ತನ್ನ ಕೆಲವು ಸ್ನೇಹಿತರೊಂದಿಗೆ ದೇವಸ್ಥಾನದಿಂದ ಮನೆಗೆ ಹಿಂದಿರುಗುತ್ತಿದ್ದಾಗ ಈ ಘಟನೆ ಸಂಭವಿಸಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಇನ್ನು ಘಟನೆಗೆ ಸಂಬಂಧಿಸಿದಂತೆ ಮೂವರನ್ನು ವಶಕ್ಕೆ ಪಡೆಯಲಾಗಿದ್ದು, ಮರಣೋತ್ತರ ಪರೀಕ್ಷೆ ಮತ್ತು ವಿಚಾರಣೆ ಪ್ರಕ್ರಿಯೆಗಳು ಇನ್ನೂ ಮುಗಿದಿಲ್ಲ ಎಂಬ ಮಾಹಿತಿ ದೊರಕಿದೆ.
ಈ ಹಿಂದೆ ಪುಥೇನ್ಕರಿಯಿಲ್ ದೇವಿ ದೇವಸ್ಥಾನದಲ್ಲಿ ಶರತ್ನೊಂದಿಗೆ ವಾಗ್ವಾದ ನಡೆಸಿದ ದುಷ್ಕರ್ಮಿಗಳು, ನಿನ್ನೆ ಆತನಿಗಾಗಿ ದೇವಸ್ಥಾನದ ಬಳಿ ಕಾಯುತ್ತಿದ್ದರು, ಈ ವೇಳೆ ಮತ್ತೆ ಅವರ ಜೊತೆ ಜಗಳ ನಡೆದ ಸಂದರ್ಭದಲ್ಲಿ ಚಂದ್ರನ್ಗೆ ಇರಿದಿದ್ದಾರೆ. ಕೂಡಲೇ ಅವರನ್ನು ಸಮೀಪದ ಆಸ್ಪತ್ರೆಗೆದಾಖಲಿಸಲಾಯಿತಾದರೂ ಉಳಿಸಿಕೊಳ್ಳಲು ಸಾಧ್ಯವಾಗಲಿಲ್ಲ
7 ರಿಂದ 8 ಮಂದಿ ದುಷ್ಕರ್ಮಿಗಳ ಪೈಕಿ ಇಬ್ಬರನ್ನು ಗುರುತಿಸಲು ಸಾಧ್ಯವಾಯಿತು ಮತ್ತು ಘಟನೆಯಲ್ಲಿ ಭಾಗಿಯಾಗಿದ್ದ ಇನ್ನೊಬ್ಬ ವ್ಯಕ್ತಿಯೊಂದಿಗೆ ಇಬ್ಬರನ್ನು ವಶಕ್ಕೆ ಪಡೆಯಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ
ಹತ್ಯೆಯ ಕುರಿತು ಪ್ರತಿಕ್ರಿಯಿಸಿದ ಬಿಜೆಪಿ ರಾಜ್ಯಾಧ್ಯಕ್ಷ ಕೆ ಸುರೇಂದ್ರನ್ ತ್ರಿಶೂರ್ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಹತ್ಯೆಗೀಡಾದವನು ಆರ್ಎಸ್ಎಸ್ ಕಾರ್ಯಕರ್ತನಾಗಿದ್ದು, ಡ್ರಗ್ ಮಾಫಿಯಾದ ಸದಸ್ಯರು ಅವರನ್ನು ನಿರ್ದಯವಾಗಿ ಇರಿದು ಕೊಂದಿದ್ದಾರೆ.ಆಡಳಿತ ಪಕ್ಷದ ರಕ್ಷಣೆ ಇರುವುದರಿಂದಲೇ ರಾಜ್ಯದಲ್ಲಿ ಡ್ರಗ್ಸ್ ಮಾಫಿಯಾಗಳು, ಕೊಟೇಶನ್ ಗ್ಯಾಂಗ್ಗಳು ಸೇರಿದಂತೆ ಸಮಾಜಘಾತುಕ ಶಕ್ತಿಗಳು ಮುಕ್ತವಾಗಿ ಓಡಾಡುತ್ತಿದ್ದಾರೆ.
ಅಲ್ಲದೆ ಪ್ರಕರಣದ ಆರೋಪಿಗಳೆಲ್ಲರೂ ಸಿಪಿಐ(ಎಂ) ಕಾರ್ಯಕರ್ತರು. ಇಂತಹ ಸಮಾಜವಿರೋಧಿ ಅಂಶಗಳನ್ನು ನಿಗ್ರಹಿಸುವಲ್ಲಿ ಮತ್ತು ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿ ಎಲ್ಡಿಎಫ್ ಸರಕಾರ ವಿಫಲವಾಗಿದೆ ಎಂದು ಆರೋಪಿಸಿದ್ದಾರೆ.
ಎಲ್ಲಾ ಆರೋಪಿಗಳು ಸಮಾಜ ವಿರೋಧಿ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡವರು, ಅವರ ವಿರುದ್ಧ ಹಲವಾರು ಕ್ರಿಮಿನಲ್ ಪ್ರಕರಣಗಳು ದಾಖಲಾಗಿವೆ, ಆದರೆ ಅವರು ಯಾವುದೇ ಡ್ರಗ್ ಮಾಫಿಯಾದ ಭಾಗವಾಗಿರಲಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.