ಬೆಂಗಳೂರು, ಫೆ 17 (DaijiworldNews/KP): ಯಾರು ರಾಷ್ಟ್ರದ್ರೋಹ ಮಾಡಿದ್ದಾರೋ ಅವರು ರಾಜೀನಾಮೆ ಕೊಡಲಿ, ನಾನೇಕೆ ರಾಜೀನಾಮೆ ನೀಡಬೇಕು ಎಂದು ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯಿತ್ ರಾಜ್ ಸಚಿವ ಕೆ.ಎಸ್.ಈಶ್ವರಪ್ಪ ಕಿಡಿಕಾರಿದ್ದಾರೆ.
ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯಾರು ರಾಷ್ಟ್ರದ್ರೋಹ ಮಾಡಿದ್ದಾರೋ ಅವರು ರಾಜೀನಾಮೆ ಕೊಡಲಿ, ನಾನು ರಾಷ್ಟ್ರಭಕ್ತ, ಆದರೆ ರಾಷ್ಟ್ರಧ್ವಜ ಇಲ್ಲದೇ ಇರುವುದನ್ನು ಇದೆ ಎಂದು ಹೇಳಿ ರಾಷ್ಟ್ರದ್ರೋಹ ಮಾಡಿದ ಡಿಕೆಶಿಯವರೇ ರಾಜೀನಾಮೆ ಕೊಡಲಿ ಎಂದು ಕಿಡಿಕಾರಿದ್ದಾರೆ.
ಇನ್ನು ತಿರಂಗ ಯಾತ್ರೆ ಮಾಡಿದವನು ನಾನು, ತುರ್ತುಪರಿಸ್ಥಿತಿ ವೇಳೆ ಜೈಲಿಗೂ ಹೋಗಿ ಬಂದಿದ್ದೇನೆ, ಆದರೆ ಮಾಧ್ಯಮದವರು ಕೆಂಪು ಕೋಟೆ ಮೇಲೆ ಕೇಸರಿ ಧ್ವಜ ಹಾರಿಸುತ್ತೀರಾ ಎಂಬ ಪ್ರಶ್ನೆಗೆ 200-300 ವರ್ಷಗಳಲ್ಲಿ ಕೇಸರಿ ರಾಷ್ಟ್ರಧ್ವಜ ಆಗಬಹುದು ಎಂದಷ್ಟೇ ಹೇಳಿದ್ದೇನೆ, ಅದು ಹೇಗೆ ರಾಷ್ಟ್ರದ್ರೋಹದ ಕೆಲಸವಾಗುತ್ತದೆ ಎಂದು ಹೇಳಿದರು.
ಅಲ್ಲದೆ ಕಾಶ್ಮೀರದ ಲಾಲ್ ಚೌಕ್ ನಲ್ಲಿ ಉಗ್ರಗಾಮಿಗಳ ಭಯವಿಲ್ಲದೇ ಮುರಳಿ ಮನೋಹರ ಜೋಷಿ, ನರೇಂದ್ರ ಮೋದಿ ನೇತೃತ್ವದಲ್ಲಿ ರಾಷ್ಟ್ರಧ್ವಜ ಹಾರಿಸಿಬಂದವನು ನಾನು. ರಾಷ್ಟ್ರಭಕ್ತನಾದ ನಾನು ರಾಜೀನಾಮೆ ಕೊಡೋ ಪ್ರಶ್ನೆಯೇ ಇಲ್ಲ ಎಂದರು
ಕಾಂಗ್ರೆಸ್ನವರು ದೇಶ ದ್ರೋಹ ಹಾಗೂ ಲೂಟಿ ಮಾಡಿದ್ದಾರೆ, ಅವರೇ ಮೊದಲು ರಾಜೀನಾಮೆ ಕೊಡಲಿ ಎಂದು ಆಕ್ರೋಶ ವ್ಯಕ್ತಪಡಿಸಿದರು.