ಬೆಂಗಳೂರು, ಫೆ 16 (DaijiworldNews/KP): ಕೆಂಪು ಕೋಟೆಯ ಮೇಲೆ ಕೇಸರಿ ಧ್ವಜವನ್ನು ಹಾರಿಸುತ್ತೇವೆ ಎಂಬ ಹೇಳಿಕೆ ನೀಡಿದ್ದ ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್.ಈಶ್ವರಪ್ಪ ವಿರುದ್ದ ಕಾಂಗ್ರೆಸ್ ಸದಸ್ಯರ ನಡುವೆ ಏರಿದ ಧ್ವನಿಯಲ್ಲಿ ವಾಗ್ದಾದ ನಡೆದು ಗದ್ದಲ-ಗೊಂದಲದಿಂದ ಸದನವನ್ನು ಮುಂದೂಡಿದ ಘಟನೆ ನಡೆದಿದೆ.
ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಪೂರ್ವಭಾವಿ ಪ್ರಸ್ತಾಪ ಮಾಡುತ್ತಾ, ರಾಜಧಾನಿ ದೆಹಲಿಯ ಕೆಂಪು ಕೋಟೆಯಲ್ಲಿ ಕೇಸರಿ ಧ್ವಜ ಹಾರಿಸುತ್ತೇನೆ ಎಂದು ಈಶ್ವರಪ್ಪ ಹೇಳಿಕೆ ನೀಡಿದ್ದು, ಈವರೆಗೂ ಸರ್ಕಾರ ಅವರ ವಿರುದ್ದ ಯಾವುದೇ ಕ್ರಮ ಕೈಗೊಂಡಿಲ್ಲ. ಈಶ್ವರಪ್ಪನವರನ್ನು ಮುಖ್ಯಮಂತ್ರಿಗಳು ಸಚಿವ ಸ್ಥಾನದಿಂದ ವಜಾ ಮಾಡಬೇಕು ಹಾಗೂ ಮೊಕದ್ದಮೆ ದಾಖಲಿಸಬೇಕೆಂದು ಒತ್ತಾಯಿಸಿದರು.
ಆಗ ಕಾಂಗ್ರೆಸ್ ಸದಸ್ಯರು ಮೇಜು ಕುಟ್ಟಿ ಸ್ವಾಗತಿಸಿದ್ದು. ರಾಷ್ಟ್ರಧ್ವಜಕ್ಕೆ ಅಗೌರವ ತೋರಿದ ಸಚಿವರ ವಿರುದ್ಧ ಮೊಕದ್ದಮೆ ಹೂಡಬೇಕು. ದೆಹಲಿಯಲ್ಲಿ ರೈತರು ಪ್ರತಿಭಟನೆ ಮಾಡುವಾಗ ಧ್ವಜ ಹಾರಿಸಿದ್ದರಿಂದ ಮೊಕದ್ದಮೆ ದಾಖಲಿಸಿದ್ದಾರೆ ಎನ್ನುತ್ತಿದ್ದಂತೆ, ಆರಗ ಜ್ಞಾನೇಂದ್ರ ಅವರು ಮಾತನಾಡಿ, ಖಲಿಸ್ಥಾನದ ಧ್ವಜ ಹಾರಿಸಿದ್ದರು ಎಂದರು.
ನಂತರ ಮಾತನಾಡಿದ ಕಾನೂನು ಸಚಿವ ಜೆ.ಸಿ.ಮಾಧುಸ್ವಾಮಿ, ಈಶ್ವರಪ್ಪ ಅವರು ರಾಷ್ಟ್ರ ಧ್ವಜಕ್ಕೆ ಎಂದಿಗೂ ಅಗೌರವ ತೋರಿಲ್ಲ, ಅಲ್ಲದೆ ದೇಶ ದ್ರೋಹವೂ ಆಗಿಲ್ಲ. ಅವರ ಹೇಳಿಕೆಯನ್ನು ಸರಿಯಾಗಿ ಅರ್ಥ ಮಾಡಿಕೊಳ್ಳಬೇಕು. ಹೀಗಾಗಿ ನಿಲುವಳಿ ಸೂಚನೆಯಡಿ ಬರುವುದಿಲ್ಲ. ಅದನ್ನು ಪರಿಗಣಿಸಬಾರದು ಎಂದು ಸಭಾಧ್ಯಕ್ಷರಲ್ಲಿ ಮನವಿ ಮಾಡಿದರು.
ಈ ಸಂದರ್ಭದಲ್ಲಿ ಮತ್ತೆ ಕಾಂಗ್ರೆಸ್-ಬಿಜೆಪಿ ಸದಸ್ಯರ ನಡುವೆ ಮಾತಿನ ಚಕಮಕಿ ನಡೆದು ಇಡೀ ಸದನದಲ್ಲಿ ಗೊಂದಲದ ಸೃಷ್ಟಿಸಿತ್ತು.
ಈ ನಡುವೆ ಬಿಜೆಪಿ ಶಾಸಕ ಸಿ.ಟಿ.ರವಿ, ರಾಷ್ಟ್ರಧ್ವಜ ಹಿಡಿದವರನ್ನು ಗುಂಡು ಹಾರಿಸಿದ್ದೀರಿ ಎಂದಾಗ ಮತ್ತೆ ಆಡಳಿತ ಮತ್ತು ಪ್ರತಿಪಕ್ಷದ ಸದಸ್ಯರ ನಡುವೆ ವಾಗ್ವಾದ ತಾರಕಕ್ಕೇರಿತು.
ಆರೋಪ-ಪ್ರತ್ಯಾರೋಪಗಳ ಮಧ್ಯ ಈಶ್ವರಪ್ಪ ಅವರು ಮೌನವಾಗಿಯೇ ಆಲಿಸುತ್ತಿದ್ದರು. ಆಗ ಚರ್ಚೆಗೆ ಅವಕಾಶ ಕೊಟ್ಟರೆ ರಾಷ್ಟ್ರಧ್ವಜಕ್ಕೆ ಸಂಬಂಸಿದ ಪೂರ್ಣ ವಿವರ ನೀಡುವುದಾಗಿ ಸಿದ್ದರಾಮಯ್ಯ ಹೇಳಿಕೆಯ ವಿರೋಧಿಸಿ ಮಾತನಾಡಿದ ಸಚಿವ ಮಾಧುಸ್ವಾಮಿ, ಧ್ವಜಕಾಯ್ದೆ ವಿರೋಧ ಪಕ್ಷದ ನಾಯಕರು ಉಲ್ಲೇಖಿಸಿದ್ದಾರೆ.
ಅಲ್ಲದೆ ಈ ಹೇಳಿಕೆಯನ್ನು ಈಶ್ವರಪ್ಪ ಹೇಳಿಕೆ ನೀಡಿದ್ದಲ್ಲ. ಬದಲಾಗಿ ಮಾಧ್ಯಮದವರು ಕೆಂಪು ಕೋಟೆ ಮೇಲೆ ಕೇಸರಿ ಧ್ವಜ ಹಾರಿಸುತ್ತೀರಾ ಎಂಬ ಪ್ರಶ್ನೆಗೆ ಅವರು 200-300 ವರ್ಷಗಳಲ್ಲಿ ರಾಷ್ಟ್ರಧ್ವಜ ಆಗಬಹುದು ಎಂದಷ್ಟೇ ಹೇಳಿದ್ದಾರೆ. ಎಲ್ಲಿಯೂ ಅವರು ರಾಷ್ಟ್ರ ಧ್ವಜಕ್ಕೆ ಅಗೌರವ ತೋರಿಲ್ಲ ಎಂದರು.
ಈ ವೇಳೆ ಕಾಂಗ್ರೆಸ್ ಶಾಸಕ ಡಿ.ಕೆ.ಶಿವಕುಮಾರ್ ಮಾತನಾಡಿ, ಪತ್ರಿಕೆಯಲ್ಲಿ ಬಂದಿರುವುದೆಲ್ಲಾ ತಪ್ಪೇ ಎಂದು ಪ್ರಶ್ನಿಸಿದರು. ಆಗ ಮತ್ತೆ ಎರಡು ಪಕ್ಷದವರ ನಡುವೆ ವಾಗ್ವಾದ ನಡೆದು ಸದನದಲ್ಲಿ ಕೋಲಾಹಲ ಉಂಟಾಯಿತು.
ಈಶ್ವರಪ್ಪ ಅವರಿಗೆ ಮಾತನಾಡಲು ಅವಕಾಶ ನೀಡದಾಗ ಅದಕ್ಕೂ ಮೊದಲು ನನಗೆ ಮಾತನಾಡಲು ಅವಕಾಶ ನೀಡಬೇಕೆಂದು ಸಿದ್ದರಾಮಯ್ಯ ಹೇಳಿದರು. ಆಗ ಮತ್ತೆ ಮಾತಿನ ಚಕಮಕಿ ನಡೆದು, ಗದ್ದಲ ವಿಪರೀತವಾದ ಹಿನ್ನಲೆಯಲ್ಲಿ ಸಭಾಧ್ಯಕ್ಷರು ಸದನದಲ್ಲಿದ್ದ ಎಲ್ಲಾ ಮೈಕ್ಗಳನ್ನು ಸ್ವಿಚ್ ಆಫ್ ಮಾಡುವಂತೆ ಸೂಚಿಸಿದರು.
ನಂತರ ಸಿದ್ದರಾಮಯ್ಯ ನವರಿಗೆ ಮಾತನಾಡಲು ಅವಕಾಶ ನೀಡಿದ ಹಿನ್ನಲೆಯಲ್ಲಿ ಮತ್ತೆ ವಾಗ್ವಾದ ತಾರಕಕ್ಕೇರಿದಾಗ ಸದನವನ್ನು ಮುಂದೂಡಲಾಯಿತು.