ಬೆಂಗಳೂರು, ಫೆ 16 (DaijiworldNews/KP): ಹಿಜಾಬ್ ವಿವಾದ ಹೈಕೋರ್ಟ್ ಆದೇಶವನ್ನು ಉಲ್ಲಂಘಿಸಿದರೆ ಶಿಸ್ತು ಕ್ರಮ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿದ್ದಾರೆ.
ಇಂದು ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹೈಕೋರ್ಟ್ ಆದೇಶವನ್ನು ಪಾಲನೆ ಮಾಡುವುದು ಜನ ಸಾಮಾನ್ಯರ ಕರ್ತವ್ಯ, ಆದರೆ ಕೆಲವೊಂದು ಕಾಲೇಜುಗಳಲ್ಲಿ ಪಾಲನೆ ಮಾಡಲಾಗುತ್ತಿಲ್ಲ, ಅಂತಹವರ ವಿರುದ್ದ ಸೂಕ್ತ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಅವರು ಹೇಳಿದರು.
ಇನ್ನು ನಾವು ಹಿಜಾಬ್ ಧರಿಸಿ ಕಾಲೇಜಿಗೆ ಬರುತ್ತೇವೆ ಎಂದು ಕೆಲ ಮುಸ್ಲಿಂ ವಿದ್ಯಾರ್ಥಿನಿಯರು ಪ್ರತಿಭಟನೆ ಮಾಡುತ್ತಿದ್ದಾರೆ, ಆದರೆ ಹಿಜಾಬ್ ಧರಿಸಿದವರು ಶಾಲೆ ಒಳಗಡೆ ಬರುವುದಕ್ಕೆ ಅವಕಾಶವಿಲ್ಲ ಎಂದರು.
ಇಲ್ಲಿಯವರೆಗೂ ಮಕ್ಕಳ ಮನಸ್ಸಿಗೆ ನೋವಾಗುತ್ತದೆ, ಆದ್ದರಿಂದ ಮಕ್ಕಳ ಮೇಲೆ ಮೃದು ಸ್ವಭಾವ ತೋರಿ ಬುದ್ಧಿ ಹೇಳುತ್ತ ಬಂದಿರುವ ನಮ್ಮ ಆಡಳಿತ ಮಂಡಳಿ, ಪೊಲೀಸ್ ಇಲಾಖೆಯು ಇನ್ನು ಮುಂದೆ ರೀತಿ ಮಾಡುವುದಿಲ್ಲ ಎಂದು ಹೇಳಿದರು.
ಪ್ರತಿಭಟನೆ ಮಾಡುವರು ಮಾಡಲಿ, ಆದರೆ ಅವರು ಶಾಲೆ ಒಳಗಡೆ ಬರುವುದಕ್ಕೆ ಅವಕಾಶವಿಲ್ಲ.ಕೆಲವು ಕಾಲೇಜುಗಳಲ್ಲಿ ನಿಯಮ ಉಲ್ಲಂಘನೆ ವಿಚಾರ ಗಮನಕ್ಕೆ ಬಂದಿದೆ. ಯಾರು ಕೂಡ ನಿಯಮ ಉಲ್ಲಂಘನೆ ಮಾಡದಂತೆ ಹಾಗೂ ಕೋರ್ಟ್ ಆದೇಶದಂತೆ ಶಾಲೆಗಳ ನಡೆಯುವಂತೆ ನೋಡಿಕೊಳ್ಳುವಂತೆ ಪೊಲೀಸರಿಗೆ ಸೂಚನೆ ನೀಡಿದ್ದೇನೆ ಎಂದು ತಿಳಿಸಿದರು
ರಾಜ್ಯದ ಕೆಲವೆಡೆ ಮಾತ್ರ ಪ್ರತಿಭಟನೆ ಆಗಿದ್ದು, ಬಳಿಕ ಅಲ್ಲಿನ ಜಿಲ್ಲಾಧಿಕಾರಿಗಳು, ಪೊಲೀಸ್ ಅಧಿಕಾರಿಗಳು ಮನವೊಲಿಸಿ ಅವರನ್ನು ಶಾಲೆಗೆ ಕಳುಹಿಸಿದ್ದಾರೆ. ಎಲ್ಲಿಯೂ ಯಾವುದೇ ಪ್ರತಿರೋಧ ವ್ಯಕ್ತವಾಗಿಲ್ಲ ಎಂದರು.
ಈಗಾಗಲೇ ಡಿಸಿ ಮತ್ತು ಎಸ್'ಪಿ ಜೊತೆಗೆ ಮಾತನಾಡಿದ್ದು, ರಾಜ್ಯದಲ್ಲಿ ಶಾಂತಿಯುತ ವಾತಾವರಣ ನಿರ್ಮಿಸಲು ಎಲ್ಲರೂ ಸಹಕರಿಸಬೇಕು ಎಂದು ಹೇಳಿದರು.