ಬೆಂಗಳೂರು, ಫೆ 16 (DaijiworldNews/KP): ರಾಜ್ಯದಲ್ಲಿ ಮತ್ತೆ ಹಿಜಾಬ್-ಕೇಸರಿ ಶಾಲು ವಿವಾದ ಭುಗಿಲೆದಿದೆ, ಹಲವು ಜಿಲ್ಲೆಯ ಮುಸ್ಲಿಂ ವಿದ್ಯಾರ್ಥಿಗಳು ಶಿಕ್ಷಣಕ್ಕಿಂತ ನಮಗೆ ಹಿಜಾಬ್ ಮುಖ್ಯ ಯಾವುದೇ ಕಾರಣಕ್ಕೂ ನಾವು ಹಿಜಾಬ್ ತೆಗೆಯಲ್ಲ ಎಂದು ಎಂದು ಪಟ್ಟು ಹಿಡಿದಿರುವ ಘಟನೆ ನಡೆದಿದೆ.
ಶಿವಮೊಗ್ಗದ ಡಿವಿಎಸ್ ಕಾಲೇಜುಗಳಿಗೆ ಹಿಜಾಬ್ ಧರಿಸಿ ಬಂದಿದ್ದು ವಿದ್ಯಾರ್ಥಿನಿಯರನ್ನು ತರಗತಿ ಒಳಗೆ ಬಿಡಲಿಲ್ಲ, ಈ ವೇಳೆ ಪರೀಕ್ಷೆಗೆ ಬರೆಯದಿದ್ದರೂ, ಪರವಾಗಿಲ್ಲ ಶಿಕ್ಷಣಕ್ಕಿಂತ ನಮಗೆ ಹಿಜಾಬ್ ಮುಖ್ಯ, ಅಲ್ಲದೆ ಸರ್ಕಾರ ಯಾವ ಆದೇಶ ಹೊರಡಿಸಿದ್ರೂ, ನ್ಯಾಯಾಲಯ ಏನೇ ಹೇಳಿದ್ರೂ, ನಾವು ಪ್ರಾಣ ಹೋದ್ರೂ ಹಿಜಾಬ್ ತೆಗೆಯಲ್ಲ ಎಂದು ಪಟ್ಟು ಹಿಡಿದಿದ್ದಾರೆ.
ಇನ್ನು ವಿಜಯಪುರದ ಸರ್ಕಾರಿ ಪಿಯು ಹಾಗೂ ಡಿಗ್ರಿ ಕಾಲೇಜಿನಲ್ಲಿ ಹಿಜಾಬ್ ವಿದ್ಯಾರ್ಥಿಗಳಿಗೆ ಕಾಲೇಜಿಗೆ ಅವಕಾಶ ನೀಡದ ನಿಟ್ಟಿನಲ್ಲಿ ರೊಚ್ಚಿಗೆದ್ದ ವಿದ್ಯಾರ್ಥಿಗಳು ವಿ ವಾಂಟ್ ಜಸ್ಟೀಸ್ ಎಂದು ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಅಲ್ಲದೆ ಕಾಲೇಜು ಸುತ್ತಮುತ್ತ 144 ಸೆಕ್ಷನ್ ಜಾರಿ ಇದ್ದರು ಕೂಡ ವಿದ್ಯಾರ್ಥಿನಿಯರನ್ನು ಬೆಂಬಲಿಸಲು ಪೋಷಕರು ಕಾಲೇಜಿಗೆ ಆಗಮಿಸಿ ಪ್ರತಿಭಟನೆ ನಡೆಸಿದ್ದು, ಸದ್ಯ ಪೊಲೀಸರು ಹಾಗೂ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿ ಪೋಷಕರ ಮನವೊಲಿಸುವ ಕೆಲಸ ಮಾಡುತ್ತಿದ್ದಾರೆ.
ಸರ್ಕಾರ ಈಗ ಹಿಜಾಬ್ ಧರಿಸಬಾರದು ಎಂದು ಹೇಳಿದೆ, ನಾಳೆ ಬಟ್ಟೆ ಬಿಚ್ಚಿ ಬನ್ನಿ ಎಂದು ಹೇಳುತ್ತೆ. ಅದು ಸಾಧ್ಯವಾ ಎಂದು ಕೋಲಾರದಲ್ಲಿ ವಿದ್ಯಾರ್ಥಿನಿಯ ಪೋಷಕರು ಪ್ರಶ್ನಿಸಿದ್ದಾರೆ. ನಮ್ಮ ಮಕ್ಕಳು ಹಿಜಾಬ್, ಬುರ್ಖಾವನ್ನೂ ಮಾತ್ರವಲ್ಲ ಸಮವಸ್ತ್ರವನ್ನೂ ಧರಿಸಿದ್ದಾರೆ ಆದರೂ ಮಕ್ಕಳನ್ನು ಶಾಲೆಯ ಒಳಗೆ ತೆಗೆದುಕೊಳ್ಳುತ್ತಿಲ್ಲ ಎಂದು ಆಕ್ರೋಶ ಹೊರ ಹಾಕಿದ್ದಾರೆ.
ರಾಮನಗರದಲ್ಲಿಯು ಕೂಡ ಹಿಜಾಬ್ ವಿಚಾರ ತಾರಕಕ್ಕೇರಿದ್ದು, ಹಿಜಾಬ್ ಧರಿಸಿದ ವಿದ್ಯಾರ್ಥಿಗಳನ್ನು ಕಾಲೇಜು ಗೇಟ್ನ ಒಳಗೆ ಬಿಡಲಿಲ್ಲ ಎಂದು ಗೇಟ್ಗಳನ್ನು ತಾವೇ ತೆಗೆದು ಒಳಹೋಗಿದ್ದಾರೆ, ಅಲ್ಲದೆ ಪ್ರಾಂಶುಪಾಲರು ಮನವಿ ಮಾಡಿದರು ಕೂಡ ವಿದ್ಯಾರ್ಥಿನಿಗಳು ತಮ್ಮ ಹಠ ಹಿಡಿದು ಧರಣಿಗೆ ಕುಳಿತ್ತಿದ್ದಾರೆ.
ಇನ್ನು ತುಮಕೂರಿನ ಕೆಲ ಕಾಲೇಜಿನ ವಿದ್ಯಾರ್ಥಿನಿಯರು ಹಿಜಾಬ್ ನಮ್ಮ ಹಕ್ಕು ನಾವು ಅದನ್ನು ಎಂದಿಗೂ ಬಿಡುವುದಿಲ್ಲ ಎಂದು ಶಾಲೆಯಿಂದ ಟೌನ್ಹಾಲ್ ಬಳಿಗೆ ಧರಣಿ ಮಾಡಿದ್ದಾರೆ. ಈ ವೇಳೆ 'ಅಲ್ಲಾಹು ಅಕ್ಬರ್’ ಘೋಷಣೆಯನ್ನು ಕೂಡ ಕೂಗಿದ್ದಾರೆ.
ಬಾಗಲಕೋಟೆಯಲ್ಲಿ ಕೋರ್ಟ್ ಆದೇಶವನ್ನು ಎಲ್ಲಾ ವಿದ್ಯಾರ್ಥಿಗಳು ಪಾಲಿಸಬೇಕು ಎಂದು ಶಿಕ್ಷಕರು ವಿದ್ಯಾರ್ಥಿನಿಯರ ಬಳಿ ಮನವಿ ಮಾಡಿದ್ದು, ಕೆಲ ವಿದ್ಯಾರ್ಥಿನಿಯರು ಹಿಜಾಬ್ ತೆಗೆದು ತರಗತಿ ಒಳಗೆ ಹೊಗಿದ್ದಾರೆ, ಆದರೆ ಇನ್ನು ಕೆಲ ವಿದ್ಯಾರ್ಥಿನಿಯರು ನಮಗೆ ಧರ್ಮ ಮುಖ್ಯ ಎಂದು ಮನೆಗೆ ತೆರಳಿದ್ದಾರೆ.