ಗುರುಗ್ರಾಮ, ಫೆ 16(DaijiworldNews/MS): ದೆಹಲಿಯ ಹೊರವಲಯದಲ್ಲಿರುವ ಗುರುಗ್ರಾಮದ ಸಮೀಪ ನಿರ್ಮಾಣದ ಹಂತದ ರೈಲ್ವೆ ಮೇಲ್ಸೆತುವೆ ಬಳಿ ಸೆಲ್ಫಿ ತೆಗೆದುಕೊಳ್ಳುತ್ತಿದ್ದ ನಾಲ್ವರು ಯುವಕರು ರೈಲಿನಡಿಗೆ ಸಿಲುಕಿ ದಾರುಣವಾಗಿ ಸಾವನ್ನಪ್ಪಿದ್ದಾರೆ.
ಮೃತರನ್ನು ದೇವಿಲಾಲ್ ಕಾಲೋನಿ ನಿವಾಸಿಗಳಾದ ಸಮೀರ್ (19), ಮೊಹಮ್ಮದ್ ಅನಸ್ (20), ಯೂಸುಫ್ ಅಲಿಯಾಸ್ ಭೋಲಾ (21) ಮತ್ತು ಯುವರಾಜ್ ಗೋಗಿಯಾ (18) ಎಂದು ಗುರುತಿಸಲಾಗಿದೆ.
ರೈಲ್ವೆ ಪೊಲೀಸ್ (GRP) ಪ್ರಕಾರ, ದೆಹಲಿಯ ಸರಾಯ್ ರೋಹಿಲ್ಲಾದಿಂದ ಅಜ್ಮೀರ್ಗೆ ಹೋಗುವ ಜನ ಶತಾಬ್ದಿ ಎಕ್ಸ್ಪ್ರೆಸ್ ಗುರ್ಗಾಂವ್ ರೈಲು ನಿಲ್ದಾಣದಿಂದ ಬಸಾಯಿ ರೈಲು ನಿಲ್ದಾಣದ ಕಡೆಗೆ ಚಲಿಸುತ್ತಿದ್ದಾಗ ಸಂಜೆ 5 ಗಂಟೆಗೆ ಅಪಘಾತ ಸಂಭವಿಸಿದೆ.
18 ರಿಂದ 21 ವರ್ಷ ವಯಸ್ಸಿನ ನಾಲ್ವರು ಯುವಕರು ರೈಲು ಸಮೀಪಿಸುತ್ತಿದ್ದಾಗ ಟ್ರ್ಯಾಕ್ನಲ್ಲಿ ನಿಂತು ಸೆಲ್ಫಿ ತೆಗೆದುಕೊಳ್ಳಲು ಪ್ರಾರಂಭಿಸಿದರು. ರೈಲು ಸಾಕಷ್ಟು ಸಮೀಪ ಬಂದರೂ ಯುವಕರು ರೈಲಿನ ಸಮೀಪವಿರುವ ಪೋಟೋ ಬೇಕು ಎಂದು ಕದಲದೇ ಪೋಟೋಗಾಗಿ ಮುಗಿಬಿದ್ದರು.
ಇದರ ಪರಿಣಾಮ ನಾಲ್ವರೂ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ರೈಲು ಚಾಲಕನಿಂದ ಮಾಹಿತಿ ಪಡೆದ ತಕ್ಷಣ, ಜಿಆರ್ಪಿ ಪೊಲೀಸ್ ಠಾಣೆಯ ತಂಡವು ಸ್ಥಳಕ್ಕೆ ತಲುಪಿ ಪರಿಶೀಲನೆ ನಡೆಸಿತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.