ನವದೆಹಲಿ, ಫೆ 16(DaijiworldNews/MS): ಕಳೆದ ವರ್ಷ ಜನವರಿ 26ರ ಗಣರಾಜ್ಯೋತ್ಸವ ದಿನದಂದು ಕೆಂಪು ಕೋಟೆ ಮೇಲೆ ಧ್ವಜ ಹಾರಿಸಿದ್ದ ಪ್ರಕರಣದಲ್ಲಿ ಬಂಧಿತನಾಗಿ ಜಾಮೀನಿನ ಮೇಲೆ ಹೊರಗಿದ್ದ ನಟ ದೀಪ್ ಸಿಧು ರಸ್ತೆ ಅಪಘಾತದಲ್ಲಿ ಸಾವನ್ನಪ್ಪಿದ್ದಾರೆ.
ದೆಹಲಿಯ ಬೈಪಾಸ್ನ ಕುಂಡ್ಲಿ -ಮನೇಸರ್ - ಪಲ್ವಾಲ್ ಎಕ್ಸ್ಪ್ರೆಸ್ ವೇನಲ್ಲಿ ಈ ಅಪಘಾತ ಸಂಭವಿಸಿದೆ. ಅಪಘಾತದ ಸ್ಥಳದ ದೃಶ್ಯಗಳಲ್ಲಿ ಟ್ರೇಲರ್ ಟ್ರಕ್ನ ಹಿಂಭಾಗಕ್ಕೆ ಬಿಳಿ ಬಣ್ಣದ ಮಹೀಂದ್ರಾ ಸ್ಕಾರ್ಪಿಯೊ ಗುದ್ದಿರುವುದು ಕಾಣಬಹುದಾಗಿದೆ. ಅದರಲ್ಲೂ ಕಾರಿನ ಡ್ರೈವರ್ ಸೈಡ್ ಸಂಪೂರ್ಣವಾಗಿ ನಜ್ಜಗುಜ್ಜಾಗಿದೆ.
ನಟ ದೀಪ್ ಸಿಧು ದೆಹಲಿಯಿಂದ ಪಂಜಾಬ್ನ ಭಟಿಂಡಾಗೆ ಸ್ಕಾರ್ಪಿಯೋ ಕಾರಿನಲ್ಲಿ ಪ್ರಯಾಣಿಸುತ್ತಿದ್ದ ವೇಳೆಯಲ್ಲಿ ನಿನ್ನೆ ರಾತ್ರಿ 9:30ರ ಸುಮಾರಿಗೆ ಟ್ರಕ್ಗೆ ಡಿಕ್ಕಿ ಹೊಡೆದಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಸಿಧುವನ್ನು ಆಸ್ಪತ್ರೆಗೆ ತರುವ ವೇಳೆಯಲ್ಲಿಯೇ ಅವರು ಸಾವನ್ನಪ್ಪಿದ್ದರು ಎಂದು ವೈದ್ಯರು ಘೋಷಣೆ ಮಾಡಿದ್ದಾರೆ.
ಕಳೆದ ವರ್ಷ ಫೆಬ್ರವರಿಯಲ್ಲಿ ಗಣರಾಜ್ಯೋತ್ಸವದಂದು ರೈತರು ನಡೆಸಿದ ಟ್ರ್ಯಾಕ್ಟರ್ ರ್ಯಾಲಿಯಲ್ಲಿ ಪ್ರತಿಭಟನಾಕಾರರು ಕೆಂಪು ಕೋಟೆಗೆ ಬಂದು ಪೊಲೀಸರ ಮೇಲೆ ಹಲ್ಲೆ ನಡೆಸಿದ ನಂತರ ಹಿಂಸಾಚಾರಕ್ಕೆ ಕಾರಣವಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಶ್ರೀ ಸಿಧು ಅವರನ್ನು ದೆಹಲಿ ಪೊಲೀಸರು ಬಂಧಿಸಿದ್ದರು. ನವೆಂಬರ್ 2021 ರಲ್ಲಿ ಕೇಂದ್ರವು ಹಿಂತೆಗೆದುಕೊಂಡ ಮೂರು ಹೊಸ ಕೃಷಿ ಕಾನೂನುಗಳ ವಿರುದ್ಧ ರೈತರು ಪ್ರತಿಭಟನೆ ನಡೆಸುತ್ತಿದ್ದರು.
ಈ ಪ್ರಕರಣದಲ್ಲಿ ಬಂಧಿತರಾಗಿದ್ದ ಅವರು ಏಪ್ರಿಲ್ನಲ್ಲಿ ಜಾಮೀನು ಪಡೆದಿದ್ದರು, ಆದರೆ ಬಿಡುಗಡೆಯಾದ ನಂತರ ಮತ್ತೆ ಬಂಧಿಸಲಾಯಿತು. ಏಪ್ರಿಲ್ ಅಂತ್ಯದಲ್ಲಿ ಅವರು ಎರಡನೇ ಬಾರಿಗೆ ಜಾಮೀನಿನ ಮೇಲೆ ಬಿಡುಗಡೆಯಾದರು, ದೆಹಲಿಯ ನ್ಯಾಯಾಲಯವು ಪೊಲೀಸರು ಅವರನ್ನು ಕರೆದಾಗಲೆಲ್ಲಾ ಅವರು ವಿಚಾರಣೆಗೆ ಹಾಜರಾಗಬೇಕೆಂದು ನಿರ್ದೇಶಿಸಿತ್ತು.