ಧಾರವಾಡ, ಫೆ 16(DaijiworldNews/MS): ‘ಸಮನ್ವಯ ಕವಿ’ ಎಂದು ಗುರುತಿಸಲಾಗುವ ನಾಡೋಜ ಚೆನ್ನವೀರ ಕಣವಿ ಅಸುನೀಗಿದ್ದಾರೆ. ಅಸೌಖ್ಯದಿಂದ ಆಸ್ಪತ್ರೆಗೆ ದಾಖಲಾಗಿದ್ದ ಕನ್ನಡದ ಹಿರಿಯ ಕವಿ, ನಾಡೋಜ ಚೆನ್ನವೀರ ಕಣವಿ ಧಾರವಾಡದ ಎಸ್ಡಿಎಂ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. ಕೋವಿಡ್ ಸೋಂಕು (Covid 19) ತಗುಲಿದ್ದ ಡಾ. ಚೆನ್ನವೀರ ಕಣವಿ ಜನವರಿ 14 ರಂದು ಎಸ್.ಡಿ.ಎಮ್.ಆಸ್ಪತ್ರೆಗೆ ದಾಖಲಾಗಿದ್ದರು. ಇದಲ್ಲದೆ ಅಕ್ಯೂಟ್ ರೆಸ್ಪಿರೇಟರಿ ಡಿಸ್ಟ್ರೆಸ್ ಸಿಂಡ್ರೋಮ್ನಿಂದ (ARDS) ಚೆನ್ನವೀರ ಕಣವಿ ಬಳಲುತ್ತಿದ್ದರು.
ತಂದೆ ಸಕ್ರಪ್ಪ- ತಾಯಿ ಪಾರ್ವತವ್ವ ದಂಪತಿಗಳ ಪುತ್ರನಾಗಿ ಧಾರವಾಡ ಜಿಲ್ಲೆಯ ಹೊಂಬಳ ಗ್ರಾಮದಲ್ಲಿ 1928ರ ಜೂನ್ 28ರಂದು ಜನಿಸಿದ್ದ ಚೆನ್ನವೀರ ಕಣವಿ ಶಿರುಂಡ, ಗರಗಗಳಲ್ಲಿ ಪ್ರಾಥಮಿಕ ಅಭ್ಯಾಸ ಮುಗಿಸಿದ ಮೇಲೆ ಧಾರವಾಡದ ಕರ್ನಾಟಕ ಕಾಲೇಜಿನಲ್ಲಿ ಬಿ.ಎ. ಪದವಿ (1950), ಕರ್ನಾಟಕ ವಿಶ್ವವಿದ್ಯಾಲಯದಿಂದ ಎಂ.ಎ.ಪದವಿ (1952) ಗಳಿಸಿದರು.
ಕರ್ನಾಟಕದ ವಿಶ್ವವಿದ್ಯಾನಿಲಯದ ಪ್ರಸಾರಾಂಗದಲ್ಲಿ ಕಾರ್ಯದರ್ಶಿ (1952) ಯಾಗಿ ಸೇವೆ ಪ್ರಾರಂಭಿಸಿದ ಕಣವಿ ಅವರು ಅನಂತರ 1958ರಲ್ಲಿ ಅದರ ನಿರ್ದೇಶಕರಾದರು.
ಹಲವಾರು ಪ್ರಶಸ್ತಿಗಳು ಕಣವಿ ಅವರ ಸಾಹಿತ್ಯ ಸಾಧನೆಗಾಗಿ ಬಂದಿವೆ. ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ (1981), ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ (1985), ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ (1989), ಭಾರತ ಸರಕಾರದ ಮಾನವ ಸಂಪನ್ಮೂಲ ಇಲಾಖೆಯ ಸಂಸ್ಕೃತಿ ವಿಭಾಗದ ಎಮರಿಟಿಸ್ ಫೆಲೋಷಿಪ್ (1996-98), ಪಂಪ ಪ್ರಶಸ್ತಿ (1999), ಇತ್ಯಾದಿ. 65ನೇ ಕನ್ನಡ ಸಾಹಿತ್ಯ ಸಮ್ಮೇಳನ (1996) ಹಾಸನದಲ್ಲಿ ಜರುಗಿದಾಗ ಕಣವಿ ಅವರು ಸಮ್ಮೇಳನಾಧ್ಯಕ್ಷರಾಗಿದ್ದರು.
ಕಣವಿ ಅವರು ಕವಿತೆ, ವಿಮರ್ಶೆ ಕ್ಷೇತ್ರಗಳಲ್ಲಿ ಸಾಕಷ್ಟು ಕೆಲಸ ಮಾಡಿದ್ದಾರೆ. ಕನ್ನಡ ನಾಡಿನ ಚಳವಳಿಗಳಲ್ಲಿ ಭಾಗವಹಿಸಿದ್ದಾರೆ. ಕಣವಿ ಅವರ ಕಾವ್ಯಸಂಕಲನಗಳಲ್ಲಿ ಕಾವ್ಯಾಕ್ಷಿ, ಭಾವಜೀವಿ, ಆಕಾಶಬುಟ್ಟಿ, ದೀಪಧಾರಿ, ಮೆರವಣಿಗೆ, ಜೀವಧ್ವನಿ, ನಗರದಲ್ಲಿ ನೆರಳು, ಚಿರಂತನದಾಸ ಪ್ರಸಿದ್ಧವಾಗಿವೆ. ಸಾಹಿತ್ಯ ಚಿಂತನ, ಕಾವ್ಯಾನುಸಂಧಾನ, ಸಮಾಹಿತ, ಸಮತೋಲನ ಇತ್ಯಾದಿ ವಿಮರ್ಶಾ ಗ್ರಂಥಗಳು ಜನಪ್ರಿಯವಾಗಿವೆ.