ಮುಂಬೈ, ಫೆ 16(DaijiworldNews/MS): ಬಾಲಿವುಡ್ನ ಪ್ರಖ್ಯಾತ ಸಂಗೀತ ನಿರ್ದೇಶಕ ಮತ್ತು ಗಾಯಕ ಬಪ್ಪಿ ಲಹರಿ (69) ನಿಧನರಾಗಿದ್ದಾರೆ. ಅನಾರೋಗ್ಯದಿಂದ ಮುಂಬೈನ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದ ಬಪ್ಪಿ ಅವರು ಇಂದು ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದಿದ್ದಾರೆ.
1952ರ ನವೆಂಬರ್ 27ರಂದು ಕೋಲ್ಕತ್ತಾದಲ್ಲಿ ಬಪ್ಪಿ ಲಹರಿ ತಮ್ಮ ವಿಭಿನ್ನ ಸಂಗೀತ ಶೈಲಿ ಹಾಗೂ ಅತಿ ಹೆಚ್ಚು ಚಿನ್ನಾಭರಣ ಧರಿಸುವ ಮೂಲಕ ಎಲ್ಲರ ಗಮನ ಸೆಳೆದಿದ್ದರು.
ಸಂಗೀತ ನಿರ್ದೇಶಕ ಬಪ್ಪಿ ಲಹಿರಿ ವೃತ್ತಿ ಜೀವನದಲ್ಲಿ ಅನೇಕ ಹಿಟ್ ಹಾಡುಗಳನ್ನು ಹಾಡಿದ್ದಾರೆ. ಹಲವು ರಿಯಾಲಿಟಿ ಶೋಗಳ ತೀರ್ಪುಗಾರರಾಗಿಯೂ ಕಾರ್ಯ ನಿರ್ವಹಣೆ ಮಾಡಿದ್ದಾರೆ.
ಬಪ್ಪಿ ಲಹರಿ 1970-80ರ ದಶಕದಲ್ಲಿ ಬಾಲಿವುಡ್ನಲ್ಲಿ ಮಿಂಚಿದ ಹಾಡುಗಾರ. ಬಾಲಿವುಡ್ನಲ್ಲಿ ಹಲವು ಹಿಟ್ ಹಾಡುಗಳಿಗೆ ಧ್ವನಿಯಾಗಿದ್ದ ಅವರು, 1970-80ರ ದಶಕದಲ್ಲಿ ಸದ್ದು ಮಾಡಿದ್ದ ಚಲ್ತೆ ಚಲ್ತೆ, ಡಿಸ್ಕೋ ಡ್ಯಾನರ್ ಮತ್ತು ಶರಾಬಿ ಮುಂತಾದ ಹಲವಾರು ಜನಮೆಚ್ಚಿದ ಹಾಡುಗಳಿಂದ ಹೆಸರುವಾಸಿಯಾಗಿದ್ದರು. 2020ರಲ್ಲಿ ತೆರೆಕಂಡ ಭಾಗಿ-3 ಚಿತ್ರದ ಟೈಟಲ್ ಸಾಂಗ್ ಬಪ್ಪಿ ಲಹರಿಯವರ ಕಂಠದಲ್ಲಿ ಮೂಡಿಬಂದಿದ್ದು ಇದೇ ಅವರ ಕೊನೆಯ ಹಾಡಾಗಿತ್ತು.