ಬೆಂಗಳೂರು, ಫೆ. 15 (DaijiworldNews/SM): ಹಿಜಾಬ್ ವಿವಾದದ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಬಂದ್ ಆಗಿದ್ದ ಕಾಲೇಜುಗಳ ಪುನರಾರಂಭಕ್ಕೆ ಸರ್ಕಾರ ಆದೇಶ ಹೊರಡಿಸಿದ್ದು, ಬುಧವಾರದಿಂದ ಕಾಲೇಜುಗಳು ಆರಂಭಗೊಳ್ಳಲಿದೆ.
ಸದ್ಯ ಹಿಜಾಬ್ ವಿವಾದ ಹೈಕೋರ್ಟ್ ಅಂಗಳದಲ್ಲಿದೆ. ವಿಚಾರಣೆ ಹಂತದಲ್ಲಿದ್ದು, ಈಗಾಗಲೇ ಮಧ್ಯಂತರ ಆದೇಶ ಹೊರಡಿಸಲಾಗಿದೆ. ಶಾಲಾ ಕಾಲೇಜುಗಳಲ್ಲಿ ಯಾವುದೇ ಧಾರ್ಮಿಕ ಸಂಕೇತಗಳನ್ನು ಬಳಸುವಂತಿಲ್ಲ ಎಂದು ಉಲ್ಲೇಖಿಸಲಾಗಿದೆ. ಕೋರ್ಟ್ ಆದೇಶವನ್ನು ಯಥಾವತ್ತಾಗಿ ಪಾಲಿಸಿಕೊಂಡು ವಸ್ತ್ರಸಂಹಿತೆ ಪಾಲಿಸುವಂತೆ ಸೂಚನೆ ನೀಡಲಾಗಿದೆ.
ಇನ್ನು ಕಾಲೇಜುಗಳಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆಯಂತೆ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದೆ. ಅಲ್ಲದೆ, ಈಗಾಗಲೇ ಶಿಕ್ಷಣ ಸಂಸ್ಥೆಯ ಮೂಲಕ ಶಾಂತಿ ಕಾಪಾಡುವಂತೆ ಜಿಲ್ಲಾಡಳಿತ ಹಾಗೂ ಸರಕಾರ ಮನವಿ ಮಾಡಿಕೊಂಡಿದೆ. ಎಲ್ಲರ ಚಿತ್ತ ಬುಧವಾರದ ಕಾಲೇಜು ಆರಂಭದ ಸುತ್ತ ನೆಟ್ಟಿದೆ.