ಭುವನೇಶ್ವರ, ಫೆ 15 (DaijiworldNews/HR): ಏಳು ರಾಜ್ಯಗಳಲ್ಲಿ ಒಟ್ಟು 14 ಮಹಿಳೆಯರನ್ನು ಮ್ಯಾಟ್ರಿಮೋನಿಯಲ್ ವೆಬ್ಸೈಟ್ ಗಳಲ್ಲಿ ತಾನು ವೈದ್ಯ ಎಂದು ಸುಳ್ಳು ಹೇಳಿಕೊಂಡು ಮದುವೆಯಾಗಿ ವಂಚಿಸಿರುವ ನಕಲಿ ವೈದ್ಯನನ್ನು ಒಡಿಶಾ ಪೊಲೀಸರು ಬಂಧಿಸಿದ್ದಾರೆ.
ಬಂಧಿತ ಆರೋಪಿಯನ್ನು ಬಿಧು ಪ್ರಕಾಶ್ ಸ್ವೈನ್ ಅಲಿಯಾಸ್ ರಮೇಶ್ ಸ್ವೈನ್(54) ಎಂದು ಗುರುತಿಸಲಾಗಿದೆ.
ಜಾರ್ಖಂಡ್, ಪಂಜಾಬ್, ದೆಹಲಿ, ಅಸ್ಸಾಂ, ಒಡಿಶಾದ ಮಧ್ಯವಯಸ್ಕ ಮಹಿಳೆಯರು ಮತ್ತು ವಿಚ್ಛೇದಿತರನ್ನು ಸ್ವೈನ್ ಗುರಿಯಾಗಿಸಿಕೊಂಡಿದ್ದ ಆತ ವೈವಾಹಿಕ ವೆಬ್ ಸೈಟ್ಗಳ ಮೂಲಕ ಮಹಿಳೆಯರನ್ನು ಸಂಪರ್ಕಿಸಿ ತಾನು ಕೇಂದ್ರ ಆರೋಗ್ಯ ಸಚಿವಾಲಯದಲ್ಲಿ ಕೆಲಸ ಮಾಡುವ ವೈದ್ಯ ಎಂದು ಸುಳ್ಳು ಹೇಳುತ್ತಿದ್ದ ಎನ್ನಲಾಗಿದೆ.
ಈ ಕುರಿತು ಭುವನೇಶ್ವರ ಡಿಸಿಪಿ ಉಮಾಶಂಕರ್ ದಾಶ್ ಮಾಹಿತಿ ನೀಡಿದ್ದು, ಹೆಚ್ಚು ವಿದ್ಯಾವಂತರು ಮತ್ತು ವಿವಿಧ ಸರ್ಕಾರಿ ಮತ್ತು ಖಾಸಗಿ ಸಂಸ್ಥೆಗಳಲ್ಲಿ ಉನ್ನತ ಹುದ್ದೆಗಳಲ್ಲಿ ಕೆಲಸ ಮಾಡಿದ ಮಹಿಳೆಯರನ್ನು ಗುರಿಯಾಗಿಸಿಕೊಂಡಿದ್ದ ನಕಲಿ ವೈದ್ಯ ಅವರ ಬಳಿಯಿದ್ದ ಹಣ ಪಡೆಯಲು ಸಂಚು ಹೂಡಿದ್ದನು ಎಂದಿದ್ದಾರೆ.
ಇನ್ನು ಸ್ವೇನ್ ಅನ್ನು ವಿವಾಹವಾದವರಲ್ಲಿ ಸುಪ್ರೀಂ ಕೋರ್ಟ್ನ ವಕೀಲರು ಮತ್ತು ಹಿರಿಯ ಕೇಂದ್ರ ಸಶಸ್ತ್ರ ಪೊಲೀಸ್ ಪಡೆಗಳ ಅಧಿಕಾರಿಯೂ ಸೇರಿದ್ದಾರೆ ಎನ್ನಲಾಗಿದೆ.