ಕಲಬುರ್ಗಿ, ಫೆ 15 (DaijiworldNews/MS): ರೈತರೊಬ್ಬರಿಗೆ ಭೂ ಸ್ವಾಧೀನದ ಹಣ ನೀಡದ ಹಿನ್ನೆಲೆಯಲ್ಲಿ ಕಲಬುರ್ಗಿ ಜಿಲ್ಲಾಧಿಕಾರಿ ಯಶವಂತ್ ಗುರುಕರ್ ಕಾರು ಜಪ್ತಿಗೆ ಕಲಬುರಗಿ ಜಿಲ್ಲಾ ಮೊದಲ ಹೆಚ್ಚುವರಿ ಸಿವಿಲ್ ನ್ಯಾಯಾಲಯ ಆದೇಶ ಮಾಡಿದೆ.
ಅಫಜಲಪುರ ತಾಲೂಕಿನ ಉಡಚಣ ಗ್ರಾಮದ ರೈತ ಕಲ್ಲಪ್ಪ ಮೇತ್ರೆ ಅವರಿಗೆ ಹಣ ನೀಡಬೇಕಾಗಿತ್ತು. ಆದರೆ ಪರಿಹಾರದ ಹಣ ವಿತರಣೆ ಮಾಡುವಲ್ಲಿ ವಿಳಂಬ ಮಾಡಿದ ಹಿನ್ನಲೆಯಲ್ಲಿ ಈ ಆದೇಶ ಹೊರಡಿಸಿದೆ.
2010ರಲ್ಲಿ ಜಿಲ್ಲಾಡಳಿತವೂ ರೈತ ಕಲ್ಲಪ್ಪ ಮೇತ್ರೆ ಅವರ 33 ಗುಂಟೆ ಜಮೀನು ಭೂ ಸ್ವಾಧೀನ ಮಾಡಿಕೊಂಡಿತ್ತು. ಭೀಮಾ ಏತ ನೀರವಾರಿ ಯೋಜನೆಗೆ ಭೂ ಸ್ವಾಧೀನ ಮಾಡಿಕೊಂಡು ಜೋಯನೆಯಿಂದ ಅವರ ಜಮೀನು ಮುಳುಗಡೆಯಾಗಿತ್ತು.
ಪರಿಹಾರದ ಮೊತ್ತ ಕಡಿಮೆ ಹಿನ್ನೆಲೆ ಮೇಲ್ಮನವಿ ಸಲ್ಲಿಸಿದ್ದ ರೈತ ಕಲ್ಲಪ್ಪ ಅವರಿಗೆ 7.41 ಲಕ್ಷ ಪರಿಹಾರ ನೀಡುವಂತೆ ಕೋರ್ಟ್ ಆದೇಶವಾಗಿತ್ತು. ಕೋರ್ಟ್ ಆದೇಶವಾದರೂ ಪರಿಹಾರ ನೀಡದ ಹಿನ್ನಲೆಯಲ್ಲಿ ಜಿಲ್ಲಾಧಿಕಾರಿಗೆ ಸೇರಿದ ಕೆಎ 32 ಜಿ 9990 ಸಂಖ್ಯೆಯ ಕಾರು ಜಪ್ತಿಗೆ ಆದೇಶ ಹೊರಡಿಸಲಾಗಿದೆ.