ಬೆಂಗಳೂರು, ಫೆ 14 (DaijiworldNews/KP): ದೇವಸ್ಥಾನದಲ್ಲಿ ಘಂಟಾನಾದ ಜೋರಾದ್ರೆ ಇನ್ಮುಂದೆ ಪೊಲೀಸರಿಂದ ಎಚ್ಚರಿಕೆಯ ನೋಟೀಸ್ ಬರಬಹುದು. ಇಂತಹದೊಂದು ಘಟನೆ ಬೆಂಗಳೂರಿನಲ್ಲಿ ನಡೆದಿದೆ.
ಬೆಂಗಳೂರಿನ ಪ್ರಸಿದ್ದ ದೇವಸ್ಥಾನ ಬಸವನಗುಡಿಯ ದೊಡ್ಡ ಗಣಪತಿ ದೇವಸ್ಥಾನ ಸೇರಿ ಹಲವು ದೇವಾಲಯಗಳಿಗೆ ಪೊಲೀಸ್ ಇಲಾಖೆಯೂ ಘಂಟಾನಾದದ ಶಬ್ದ ಜೋರಾಗಿದೆ ಎಂದು ನೊಟೀಸ್ ಜಾರಿ ಮಾಡಿದೆ.
ದೇವಸ್ಥಾನದ ಘಂಟೆಯ ಶಬ್ದದಿಂದಾಗಿ ಸಾರ್ವಜನಿಕರಿಗೆ ಸಮಸ್ಯೆಯಾಗುತ್ತದೆ ಏನ್ನುವ ನಿಟ್ಟಿನಲ್ಲಿ, ದೇವಸ್ಥಾನಗಳಲ್ಲಿ ಈಗಾಗಲೇ ಧ್ವನಿ ವರ್ಧಕವನ್ನು ಅಳವಡಿಸಿ 65 ಡೆಸಿಬಲ್ಗಿಂತ ಹೆಚ್ಚಿನ ಶಬ್ಧ ಬಳಸಬಾರದು ಎಂದು ಪೊಲೀಸ್ ಇಲಾಖೆ ಆದೇಶಿಸಲಾಗಿತ್ತು.
ಯಾವುದೇ ದೇವಸ್ಥಾನದಲ್ಲಿ ಘಂಟೆ, ಡಮರುಗ, ಧ್ವನಿ ವರ್ಧಕ ಬಳಕೆಯ ನಿಗದಿತ ಡೆಸಿಬಲ್ಗಿಂತ ಶಬ್ದ ಮೀರಬಾರದು. ಅಲ್ಲದೆ ಘಂಟೆ ಬಾರಿಸುವ ಸಂದರ್ಭದಲ್ಲೂ ನಿಗದಿತ 65 ಡೆಸಿಬಲ್ ಗಿಂತ ಕಡಿಮೆ ಶಬ್ದ ಬಳಕೆ ಆಗಬೇಕು ಇಲ್ಲವಾದರೆ ಧ್ವನಿ ನಿಯಂತ್ರಣ ನಿಯಮಗಳು ತಿದ್ದುಪಡಿ ಕಾಯ್ದೆ 2000 ಅಡಿಯಲ್ಲಿ ಪ್ರಕರಣ ದಾಖಲಿಸಲಾಗುವುದು ಎಂದು ತಿಳಿಸಿದ್ದಾರೆ.
ನಿಗದಿತ 65 ಡೆಸಿಬಲ್ ಗಿಂತ ಹೆಚ್ಚಿನ ಶಬ್ದ ಬಳಕೆಯಾಗಿದೆ ಎಂದು ಬೆಂಗಳೂರಿನ ದೊಡ್ಡ ಗಣಪತಿ ದೇವಸ್ಥಾನ, ಮಿಂಟೋ ಆಂಜನೇಯ ದೇಗುಲ, ಕಾರಂಜಿ ಆಂಜನೇಯಸ್ವಾಮಿ, ದೊಡ್ಡ ಬಸವಣ್ಣ ದೇವಸ್ಥಾನ, ಮಲ್ಲಿಕಾರ್ಜುನಸ್ವಾಮಿ ಸೇರಿ ಹಲವು ದೇಗುಲಗಳಿಗೆ ಬಸವನಗುಡಿ ಪೊಲೀಸ್ ಇಲಾಖೆಯಿಂದ ನೋಟಿಸ್ ಜಾರಿ ಮಾಡಲಾಗಿದೆ.