ಬೆಂಗಳೂರು, ಫೆ 14 (DaijiworldNews/KP): ಹೈಕೋರ್ಟ್ ನೀಡಿರುವ ಮಧ್ಯಂತರ ಆದೇಶಕ್ಕೆ ಎಲ್ಲಾ ಶಾಲಾ-ಕಾಲೇಜಿನ ವಿದ್ಯಾರ್ಥಿಗಳು ಗೌರವ ನೀಡಬೇಕು ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಪದವಿಪೂರ್ವ ತರಗತಿಗಳೂ ಸೇರಿದಂತೆ ಎಲ್ಲ ಶಾಲಾ ಕಾಲೇಜುಗಳು ಬುಧವಾರದಿಂದ ಮತ್ತೆ ಆರಂಭವಾಗುತ್ತಿದ್ದು, ಎಲ್ಲ ವಿದ್ಯಾರ್ಥಿಗಳು ಕೋರ್ಟ್ ಆದೇಶವನ್ನು ಪಾಲಿಸಬೇಕು ಎಂದು ಹೇಳಿದರು.
ವಿದ್ಯಾರ್ಥಿಗಳು, ಯಾವುದೇ ಆತಂಕ ಅಥವಾ ಅಭದ್ರತೆಯ ಭಯವಿಲ್ಲದೆ ಪಠ್ಯ ಚಟುವಟಿಕೆಯಲ್ಲಿ ತೊಡಗಿಕೊಳ್ಳಬೇಕು, ಅಲ್ಲದೆ ಶಾಂತಿ ಸುವ್ಯವಸ್ಥೆಗೆ ಧಕ್ಕೆ ಆಗದಂತೆ, ಮುನ್ನೆಚ್ಚರಿಕೆ ಕ್ರಮಗಳನ್ನು ಈಗಾಗಲೇ ತೆಗೆದುಕೊಳ್ಳಲಾಗಿದೆ ಎಂದು ತಿಳಿಸಿದರು.
ಇನ್ನು ಕೆಲವು ಮತೀಯ ಸಂಘಟನೆಗಳು, ಮುಗ್ದ ವಿಧ್ಯಾರ್ಥಿಗಳನ್ನು ಮುಂದಿಟ್ಟುಕೊಂಡು ಸಮಾಜ ಹಾಗೂ ಮನಸ್ಸುಗಳನ್ನು ಒಡೆಯುವ ಪ್ರಯತ್ನ ಮಾಡುತ್ತಿವೆ. ಅಂತಹ ಸಂಘಟನೆಗಳಲ್ಲಿ ಇರುವವರನ್ನು ಗುರುತಿಸಿ ಕಾನೂನು ಕ್ರಮ ಕೈಗೊಳ್ಳಲು ಸೂಚಿಸಲಾಗಿದೆ ಎಂದರು.
ಶಿವಮೊಗ್ಗ ಹಾಗೂ ಕೊಡಗು ಶಾಲೆಯಲ್ಲಿ ನಡೆದ ಘಟನೆಗೆ ಉತ್ತರಿಸಿದ ಅವರು, ಕೇವಲ ಬೆರಳೆಣಿಕೆಯಷ್ಟು ವಿದ್ಯಾರ್ಥಿಗಳು ಹಿಜಾಬ್ ಧರಿಸಿಯೇ ಶಾಲೆಗೆ ಬರುತ್ತೇವೆ ಎಂದಿದ್ದಾರೆ. ಅದು ಅವರ ಸ್ವಾಭಾವಿಕವಾದ ಅಭಿಪ್ರಾಯ ಅಲ್ಲ ಎನ್ನುವುದು ನನ್ನ ಅನಿಸಿಕೆ ಎಂದರು.