ಮುಂಬೈ, ಫೆ 15 (DaijiworldNews/MS): ಭೂಗತ ಪಾತಕಿ ದಾವೂದ್ ಇಬ್ರಾಹಿಂ ಸಹೋದರಿ ಹಸೀನಾ ಪಾರ್ಕರ್ ನಿವಾಸದ ಮೇಲೆ ಜಾರಿ ನಿರ್ದೇಶನಾಲಯ ಅಧಿಕಾರಿಗಳು ದಾಳಿ ಮಾಡಿದ್ದಾರೆ.
ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಂಬೈನ ಭೂಗತ ಜಗತ್ತಿನೊಂದಿಗೆ ನಂಟು ಹೊಂದಿದ್ದಾರೆ ಎನ್ನಲಾದ ಹಲವು ಸ್ಥಳಗಳಲ್ಲಿ ಮಹತ್ವದ ದಾಖಲೆಗಳಿಗಾಗಿ ಇಡಿ ಅಧಿಕಾರಿಗಳು ಶೋಧ ನಡೆಸುತ್ತಿದ್ದಾರೆ.
ಇಡಿ ತನಿಖೆ ನಡೆಸುತ್ತಿರುವ ಈ ಪ್ರಕರಣದಲ್ಲಿ ಮಹಾರಾಷ್ಟ್ರದ ರಾಜಕಾರಣಿಯೊಬ್ಬರು ನಂಟು ಹೊಂದಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಮಹಾರಾಷ್ಟ್ರದ ರಾಜಧಾನಿಯಲ್ಲಿ ಸುಮಾರು ಕಡೆ ಇಡಿ ಅಧಿಕಾರಿಗಳು ದಾಳಿ ಮಾಡಿದ್ದು, ದಾವೂದ್ನ ಭದ್ರಕೋಟೆ ನಾಗ್ಪಾಡ ಪ್ರದೇಶದ ಮೇಲೂ ಇಡಿ ದಾಳಿ ಆಗಿದೆ. ರಾಷ್ಟ್ರೀಯ ತನಿಖಾ ಸಂಸ್ಥೆ(ಎನ್ಐಎ) ಇತ್ತೀಚೆಗೆ ಸಲ್ಲಿಸಿದ ವರದಿ ಮತ್ತು ಗುಪ್ತಚರ ಮಾಹಿತಿ ಆಧರಿಸಿ ಇಡಿ ಅಧಿಕಾರಿಗಳು ದಾಳಿ ಮಾಡಿದ್ದಾರೆ.
ದಾವೂದ್ ಇಬ್ರಾಹಿಂ 1980 ರ ದಶಕದಲ್ಲಿ ಭಾರತದಿಂದ ಪಲಾಯನ ಮಾಡಿದ ನಂತರ ಭೂಗತ ಸಾಮ್ರಾಜ್ಯವನ್ನು ಸ್ಥಾಪಿಸಿದ ಎಂದು ನಂಬಲಾಗಿದೆ. ಇತ್ತೀಚೆಗೆ, ಪಂಜಾಬ್ನಲ್ಲಿ ದಾವೂದ್ ನ ಡಿ ಕಂಪನಿಯ ಡಿ-ಕಂಪನಿಯ ವ್ಯವಹಾರ ಪಂಜಾಬ್ನಲ್ಲೂ ಕಂಡುಬಂದಿದೆ, ಇದು ಪಂಜಾಬ್ನಲ್ಲಿ ಭಯೋತ್ಪಾದನೆಯನ್ನು ಹರಡಲು ಪಾಕಿಸ್ತಾನದ ಐಎಸ್ಐ ಭೂಗತ ಜಗತ್ತನ್ನು ಬಳಸಲಾರಂಭಿಸಿದೆ ಎಂದು ಗುಮಾನಿ ಹುಟ್ಟಿಸಿದೆ.